ಹೊಸದಿಗಂತ ವರದಿ ಬಳ್ಳಾರಿ:
ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಕಾಂಗ್ರೆಸ್ ನ ಮಾಜಿ ಸಚಿವ ಸಂತೋಷ್ ಲಾಡ್ ಅವರು ತೆರೆದ ವಾಹನದಲ್ಲೇ ಆಲಂಗಿಸಿ ಮುತ್ತಿಟ್ಟಿದ್ದು,
ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರಗಳೂ ಅಲ್ಲ ಎನ್ನುವುದು ಮತ್ತೋಮ್ಮೆ ಸಾಬೀತಾಗಿದೆ.
ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದ ಜಾತ್ರೆ ಹಿನ್ನೆಲೆ ತೆರೆದ ವಾಹನದಲ್ಲಿ ಬರುತ್ತಿದ್ದ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಗೆ ಕಾಂಗ್ರೆಸ್ ನ ಮಾಜಿ ಶಾಸಕ ಸಂತೋಷ್ ಲಾಡ್ ಅವರೂ ತೆರೆದ ವಾಹನದಲ್ಲಿ ಎದುರು ಬರುತ್ತಿರುವಾಗ ಇಬ್ಬರೂ ತಬ್ಬಿಕೊಂಡು, ಆಲಂಗಿಸಿ ಮುತ್ತಿಟ್ಟರು, ಈ ವೇಳೆ ಸಂತೋಷ್ ಲಾಡ್ ಅವರು ಗುಸುಗುಸು ಮಾತಾಡಿರುವುದು ಕಂಡು ಬಂತು.
ಶ್ರೀರಾಮುಲು ಅವರ ಬಳಿಯೇ ನಿಂತಿದ್ದ ಸಂಡೂರು ಬಿಜೆಪಿ ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ ಅವರು ಕೆಲಕಾಲ ತಬ್ಬಿಬ್ಬಾದರು. ಕೈ- ಕಮಲ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ಒಂದು ಕ್ಷಣ ವೀಕ್ಷಿಸಿ ಕೆಲವರು ಶಾಕ್ ಆಗಿದ್ದು, ಕೆಲವರು ರಾಜಕೀಯ ಅಂದ್ರೆನೇ ಇಷ್ಟೇ ಎಂದು ಮುಂದೆ ನಡೆದರು. ರಾಜಕೀಯವಾಗಿ ಬದ್ದ ವೈರಿಗಳಾಗಿದ್ದ ಇಬ್ಬರೂ ನಾಯಕರು, ಚುನಾವಣೆ ಹೊಸ್ತಿಲನಲ್ಲಿ ಅವರಿಬ್ಬರ ಈ ನಡೆ ಕುತೂಹಲಕ್ಕೆ ಕಾರಣವಾಗಿ ನಾನಾ ಚೆರ್ಚೆಗೆ ಗ್ರಾಸವಾಗಿದೆ. ಇನ್ನೂ ಕೆಲ ತಿಂಗಳಲ್ಲೇ ಚುನಾವಣೆ ದಿನಾಂಕ ಪ್ರಕಟವಾಗಲಿದೆ.
ಮೋದಿ ಅಮೀತ್ ಶಾ ಸೇರಿದಂತೆ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ಟೀಕಾಪ್ರಹಾರಗಳನ್ನು ಮಾಡುವ ಮೂಲಕ ಸಂತೋಷ್ ಲಾಡ್ ಸದಾ ಸುದ್ದಿಯಲ್ಲಿದ್ದರು. ಇಂತಹದರ ಮಧ್ಯೆ ಲಾಡ್ ಅವರನ್ನು ಸಚಿವ ಶ್ರೀರಾಮುಲು ಅವರು ಆಲಂಗಿಸಿ ಮುತ್ತಿಟ್ಟಿರುವುದು ಕಮಲ ಹಾಗೂ ಕೈ ಪಾಳೆಯದಲ್ಲಿ ಭಾರಿ ಚೆರ್ಚೆಗೆ ಗ್ರಾಸವಾಗಿದೆ.