ಹೊಸ ದಿಗಂತ ವರದಿ, ಮೈಸೂರು:
ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ಬರಲಿ ಬೇಡ ಅನ್ನೋದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿ. ಸೋಮಣ್ಣ ಜೊತೆ ಯಾವುದೇ ಸಂಪರ್ಕ ಇಲ್ಲ. ಅವರು ನಮ್ಮನ್ನ ಸಂಪರ್ಕ ಮಾಡಿಲ್ಲ. ಪಕ್ಷ ತೀರ್ಮಾನ ಮಾಡಿದರೆ ಬರಲಿ. ನಿನ್ನೆ ತಾನೇ ವಿ. ಸೋಮಣ್ಣ ನಾವು ಭೇಟಿ ಆಗಿದ್ದವು. ಆದರೆ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರ ಬಗ್ಗೆ ಮಾತುಕತೆ ಆಗಿಲ್ಲ. ಯಾರು ಪಕ್ಷಕ್ಕೆ ಬರುತ್ತಾರೋ ಅವರನ್ನ ಸಿದ್ದಾಂತ ಮೆರೆಗೆ ಸೇರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವ ಬಗ್ಗೆ ವಿಚಾರ ಮಾಡಿಲ್ಲ. ಆದರೆ ಪಕ್ಷದ ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ ಮಾಡಬೇಕಾಗುತ್ತದೆ. ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತೇನೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ನನ್ನ ಪುತ್ರ ಸುನೀಲ್ ಬೋಸ್ ಕೂಡ ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡುತ್ತಾರೆ. ಪಕ್ಷಕ್ಕೆ ಕೆಲಸ ಮಾಡಿದವರು ಸ್ಪರ್ಧೆ ಮಾಡಬೇಕು. ಸುನೀಲ್ ಬೋಸ್ ನನ್ನ ಮಗ ಅಂತ ಹೇಳುತ್ತಿಲ್ಲ, ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಪಕ್ಷ ಆಯ್ಕೆ ಮಾಡಿದರೇ ಸುನೀಲ್ ಬೋಸ್ ಆಕಾಂಕ್ಷಿ ಎಂದರು.
ಚಾಮರಾಜನಗರ, ಮೈಸೂರು- ಕೊಡಗು ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಆಯ್ಕೆ ಆಗಿಲ್ಲ. ಪಕ್ಷದ ಸದಸ್ಯತ್ವ ಪಡೆಯದವರೇ ಶಾಸಕರಾಗಿದ್ದಾರೆ. ರಾಜಕೀಯದಲ್ಲಿ ಅಂಥ ಸನ್ನಿವೇಶಗಳು ಬಂದು ಬಿಡುತ್ತವೆ. ನಂಜನಗೂಡು ಉಪಚುನಾವಣೆಯಲ್ಲೇ ಸುನೀಲ್ ಬೋಸ್ ಅಭ್ಯರ್ಥಿ ಆಗಬೇಕಿತ್ತು. ಆಗಿನಿಂದಲೇ ಸಂಘಟನೆ ಮಾಡಿದ್ದಾನೆ. ಆದರೆ ಮೂರು ಚುನಾವಣೆಗೆ ಟಿಕೆಟ್ ಸಿಕ್ಕಿಲ್ಲ. ಅದಾಗ್ಯೂ ಮುನಿಸಿಕೊಳ್ಳದೆ ಪಕ್ಷದ ಪರ ಕೆಲಸ ಮಾಡಿದ್ದಾನೆ. ಅಭ್ಯರ್ಥಿ ಆಯ್ಕೆಗಾಗಿ ವೀಕ್ಷಕರು ಬಂದು ಅಭಿಪ್ರಾಯ ಸಂಗ್ರಹಿಸಿ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.
ಜಾತಿ ಗಣತಿ ವರದಿ ಸರ್ಕಾರಕ್ಕೇ ಸಲ್ಲಿಕೆಯಾಗದಿದ್ದರೂ ವಿರೋಧ ಯಾಕೆ
ಕಾಂತರಾಜು ಅವರ ಜಾತಿ ಗಣತಿ ವರದಿ ಇನ್ನೂ ಸರ್ಕಾರಕ್ಕೇ ಸಲ್ಲಿಕೆ ಆಗಿಲ್ಲ. ಆದರೂ ಊಹೆ ಮಾಡಿ ಗಣತಿ ವರದಿಗೆ ವಿರೋಧ ಮಾಡಿದರೆ ಹೇಗೆ ? ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆ ಸಿಗಬೇಕು. ಅದಕ್ಕಾಗಿಯೇ ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಸಲಾಗಿತ್ತು. ನಮ್ಮದೇ ಸರ್ಕಾರವಿದ್ದರೆ ವರದಿ ಸ್ವೀಕಾರ ಆಗುತ್ತಿತ್ತು. ಈಗ ವರದಿ ಸ್ವೀಕಾರ ಆಗಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಸಮಯಾವಕಾಶ ಕೇಳಿದ್ದಾರೆ. ವರದಿಯಲ್ಲಿ ಏನಿದೆ ಅಂತ ಯಾರೂ ನೋಡಿಲ್ಲ. ಸರ್ಕಾರದ ಕೈ ಸೇರುವ ಮುನ್ನವೇ ಕೆಲವರು ವಿರೋಧ ಮಾಡುತ್ತಿದ್ದಾರೆ. ಅದೆಲ್ಲ ಹೊರಗಿನ ನಿರ್ಧಾರ. ಸಂಪುಟ ತೆಗೆದುಕೊಳ್ಳುವ ತೀರ್ಮಾನ ಮಾತ್ರ ಸರ್ಕಾರದ ನಿರ್ಧಾರ ಎಂದು ಹೇಳಿದರು.