ಮಾಜಿ ಸಂಸದ ಧ್ರುವನಾರಾಯಣ್ ಪತ್ನಿ ನಿಧನ: ಪ್ರಚಾರ ಸ್ಥಗಿತಗೊಳಿಸಿ ಸಂತಾಪ ಸೂಚಿಸಿದ ಶಾಸಕ

ಹೊಸದಿಗಂತ ವರದಿ ಚಾಮರಾಜನಗರ :

ಮಾಜಿ ಸಂಸದ ದಿವಂಗತ ಅರ್. ಧ್ರುವನಾರಾಯಣ್ ರವರ ಪತ್ಮಿ ವೀಣಾ ಧ್ರುವನಾರಾಯಣ್ ಇಂದು ನಿಧನರಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಪಿ.ಮರಿಸ್ವಾಮಿ ಹಾಗೂ  ಮುಖಂಡರು, ಕಾರ್ಯಕರ್ತರು ಅರಕಲವಾಡಿಯಲ್ಲಿ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಿ, ಸ್ಥಳದಲ್ಲೇ ಒಂದು ನಿಮಿಷ ಮೌನಾಚರಣೆ ಮಾಡಿ, ಸಂತಾಪ ಸಭೆ ನಡೆಸಿ ಗೌರವ ಸೂಚಿಸಿದರು. ಬಳಿಕ ದ್ರುವನಾರಾಯಣ್ ರವರ ಮೈಸೂರಿನ ನಿವಾಸಕ್ಕೆ ತೆರಳಿದರು.

ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮದಲ್ಲಿ ಬೆಳಿಗ್ಗೆ 7-30ಕ್ಕೆ ಅರಕಲವಾಡಿ ಪಂಚಾಯಿತಿ ವ್ಯಾಪ್ತಿಯ ಚುನಾವಣಾ ಪ್ರಚಾರಕ್ಕೆ ಚಾಲನೆ‌ ನೀಡಿದರು. ಬಳಿಕ ಗ್ರಾಮದಲ್ಲಿ ಪ್ರಚಾರ ಆರಂಭಿಸಿ ಮನೆಮನೆಗೆ ತೆರಳಿ ಮತಯಾಚಿಸಿದರು. ಈ ವೇಳೆ ವೀಣಾಧ್ರುವನಾರಾಯಣ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಚಾರವನ್ನು ಮೊಟಕುಗೊಳಿಸಿ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ,  ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಅರ್.ದ್ರುವನಾರಾಯಣ್ ಇತ್ತೀಚಿಗಷ್ಟೆ ನಿಧನರಾಗಿದ್ದು,  ಅವರ ಪತ್ನಿ ವೀಣಾ ಧ್ರುವನಾರಾಯಣ್ 26 ದಿನದಲ್ಲೇ ನಿಧನವಾಗಿರುವುದು ಆಘಾತ ಉಂಟು ಮಾಡಿದೆ. ಈಗಾಗಲೇ ಕಾಂಗ್ರೆಸ್ ಅವರ ಪುತ್ರ ದರ್ಶನ ಧ್ರುವನಾರಾಯಣ್ ಅವರಿಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ನೀಡಿ  ಪ್ರಚಾರದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರು ತಾಯಿಯನ್ನು ಕಳೆದುಕೊಂಡಿದ್ದಾರೆ, ಆ ಇಬ್ಬರು ಮಕ್ಕಳಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ  ಎಂದು ಪ್ರಾರ್ಥಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಪಿ.ಮರಿಸ್ವಾಮಿ ಮಾತನಾಡಿ, ಉತ್ತಮ ಸಂಘಟಕರಾಗಿದ್ದ ಮಾಜಿ ಸಂಸದ ಅರ್.ಧ್ರುವನಾರಾಯಣ್ ಅವರ ನಿಧನದ ದುಃಖದಿಂದ ಹೊರಬರುವ ಮುನ್ನವೇ ಅವರ ಪತ್ನಿ ವೀಣಾ ಧ್ರುವನಾರಾಯಣ  ಅವರ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಎಸ್.ಸೋಮನಾಯಕ, ರಮೇಶ್,  ಪು. ಶ್ರೀನಿವಾಸನಾಯಕ, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಸೋಮೇಶ್, ಮಾಜಿ ಅಧ್ಯಕ್ಷ ನಾಗೇಂದ್ರ, ಗ್ರಾ.ಪಂ.ಮಾಜಿ ಅಧ್ಯಕ್ಷ ಚೆನ್ನೇಗೌಡ, ಕುಮಾರ್, ಮಹೇಶ್ ಕುದರ್, ಎಂ.ಶಿವಮೂರ್ತಿ, ನಾರಾಯಣಸ್ವಾಮಿ,  ಶೇಖರಪ್ಪ, ಶಂಭಪ್ಪ, ವೈ.ಪಿ.ರಾಜೇಂದ್ರ, ನಿಂಗಮಣಿ ಬಸವಣ್ಣ, ರೂಪ, ಪ್ರಭುಸ್ವಾಮಿ, ನಿವೃತ್ತ ಅಧಿಕಾರಿ ಜವರಯ್ಯ, ಮಲ್ಲಿಕ್, ವಿಜಯಕುಮಾರ್, ಹೆಬ್ಬಸೂರು ವೀರಭದ್ರ, ರಂಗಸ್ವಾಮಿ, ನಾರಾಯಣಸ್ವಾಮಿ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!