ಹೊಸದಿಗಂತ ವರದಿ, ಚಿತ್ರದುರ್ಗ :
ಶತ ಶತಮಾನಗಳಿಂದಲೂ ಶೋಷಣೆಗೆ ಗುರಿಯಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ್ಯಾಯ ಮಾಡುತ್ತಿವುದರಿಂದ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗುವಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದೇನೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಮೀಸಲಾತಿ ಹಕ್ಕು ನೀಡಿದ್ದಾರೆ. ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಾತಿ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆದಿರುವ ಜನಾಂಗಕ್ಕೆ ದೇಶದ ಪ್ರಧಾನಿ ಮೋದಿ ತರಾತುರಿಯಲ್ಲಿ ಶೇ. ೧೦ ರಷ್ಟು ಮೀಸಲಾತಿ ನೀಡಿದರು. ರಾಜ್ಯದಲ್ಲಿ ಐವತ್ತು ಲಕ್ಷದಷ್ಟು ನಾಯಕ ಸಮಾಜದವರಿದ್ದಾರೆ. ಒಂದು ಕೋಟಿ ಇಪ್ಪತ್ತೈದು ಲಕ್ಷ ಪರಿಶಿಷ್ಟ ಜಾತಿಯವರಿದ್ದಾರೆ. ಎರಡು ಕಾಲು ಕೋಟಿ ಓ.ಬಿ.ಸಿ.ಗಳಿದ್ದಾರೆ. ಕುಲಶಾಸ್ತ್ರ ಅಧ್ಯಯನ ಪ್ರಕಾರ ಯಾರ‍್ಯಾರೂ ಅರ್ಹರಿದ್ದಾರೋ ಅವರನ್ನೆಲ್ಲಾ ಪರಿಶಿಷ್ಟ ವರ್ಗಕ್ಕೆ ಸೇರಿಸಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.
ರಾಜಕಾರಣಿಗಳು ಶೋಷಿತರನ್ನು ಮತ ಬ್ಯಾಂಕಾಗಿ ಮಾಡಿಕೊಂಡು ಚೆಲ್ಲಾಟವಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮೀಸಲಾತಿ ಶೇ.೫೦ ಕ್ಕಿ ಜಾಸ್ತಿಯಾಗಬಾರದೆಂದು ಸೂಚಿಸಿದೆ. ತಮಿಳುನಾಡಿನಲ್ಲಿ ಶೇ.೬೯ ರಷ್ಟು ಮೀಸಲಾತಿ ಜಾರಿಯಲ್ಲಿದೆ. ರಾಜ್ಯ ಸರ್ಕಾರ ೨೩-೧೦-೨೦೨೨ ರಂದು ಜಸ್ಟಿಸ್ ನಾಗಮೋಹನ್‌ದಾಸ್ ವರದಿ ಮೇಲೆ ಕಾನೂನು ಮಾಡಿರುವುದರಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವುದಿಲ್ಲ. ಹಿಂದುಗಳು ನಾವೆಲ್ಲಾ ಒಂದು ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿರವರು ಈ ಸಮಾಜಗಳಿಗೆ ಏಕೆ ನ್ಯಾಯ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಆಲ್ ಪಾರ್ಟಿ ಶೆಡ್ಯೂಲ್ ಮೋದಿ ಬಳಿ ಹೋಗಿ ಮನವಿ ಮಾಡಿದ್ದೇವೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನಿಗಧಿತ ಗಡುವಿನಲ್ಲಿ ಪ್ರಧಾನಿ ಮೋದಿ ಬಳಿ ನಿಯೋಗ ಹೋಗಿ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲಿ. ಇನ್ನು ನಮ್ಮ ತಾಳ್ಮೆಯನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.
ಎಂ.ಆರ್.ನಾಯಕ ಹಿಂದುಳಿದ ವರ್ಗಗಳ ಆಯೋಗದ ವರದಿ ಬಹಿರಂಗಪಡಿಸಿ ಎಸ್‌ಸಿಪಿ, ಟಿಎಸ್‌ಪಿ, ಹಣ ೪ ಲಕ್ಷ ೪೦ ಸಾವಿರ ಕೋಟಿ ಬಜೆಟ್‌ನಲ್ಲಿ ಪರಿಶಿಷ್ಟ ವರ್ಗಕ್ಕೆ ಏಳು ಪರ್ಸೆಂಟ್ ಎಸ್‌ಟಿಗಳಿಗೆ, ೧೪ ಸಾವಿರ ಕೋಟಿ ರೂ. ಪರಿಶಿಷ್ಟ ಜಾತಿಗೆ, ೩೫ ಸಾವಿರ ಕೋಟಿ ರೂ. ಹಿಂದುಳಿದ ವರ್ಗಗಳಿಗೆ ನೀಡಬೇಕು. ಎಸ್‌ಸಿ, ಎಸ್‌ಟಿಗಳ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು. ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಮುಂದಾಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮಠಗಳಿಗೆ ಪ್ರತಿ ವರ್ಷ ಐದು ಕೋಟಿ ರೂ.ಅನುದಾನ ನೀಡುವಂತೆ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ನಮ್ಮ ಸಮುದಾಯದಿಂದ ಗೆದ್ದು ಹೋಗಿರುವ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರುಗಳು ಏಕೆ ಮಾತನಾಡುತ್ತಿಲ್ಲ. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ.ಅವ್ಯವಹಾರವಾಗಿದೆ. ಕೆಡುಕುಂಟು ಮಾಡುವವರ ವಿರುದ್ದ ಈಗಾಲಾದರೂ ಧ್ವನಿ ಎತ್ತದಿದ್ದರೆ ರಾಜ್ಯಾದ್ಯಂತ ಹೋರಾಡುತ್ತೇವೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಸಂಪತ್‌ಕುಮಾರ್, ನರಸಿಂಹಯ್ಯ, ರಾಜಣ್ಣ, ವೇಣುಗೋಪಾಲ ನಾಯಕ, ಆನಂದ, ಡಾ.ಮಂಜುಳ, ಜಯಶ್ರೀ ಗುಡ್ಡೆಕಾಯಿ ಉಪಸ್ಥಿತರಿದ್ದರು.



