ಹೊಸದಿಗಂತ ವರದಿ ಹಾಸನ:
ಹಾಸನಾಂಬೆ ತಾಯಿಯ ದರುಶನವು ಇಂದಿನಿಂದ ಸಾರ್ವಜನಿಕರಿಗೆ ದೊರೆತಿದ್ದು, ಮೊದಲ ದಿನವೇ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದಾರೆ. ಮಾಜಿ ಪ್ರಧಾನಿ ಹಚ್.ಡಿ ದೇವೆಗೌಡರು ಸೇರಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಮಾಜಿ ಸಚಿವ ಕೆ. ಗೋಪಾಲಯ್ಯ ಹೀಗೆ ಅನೇಕ ರಾಜಕೀಯ ಮುಖಂಡರು ಆಗಮಿಸಿ ಇಂದು ತಾಯಿಯ ದರುಶನ ಪಡೆದರು.
ಇಂದು ಬೆಳಿಗ್ಗೆ 6 ರಿಂದ ಸಾರ್ವಜನಿಕರು ದರುಶನ ಪಡೆಯುತ್ತಿದ್ದು, ಸಂಜೆ 6 ಗಂಟೆವರೆಗೆ ದರುಶನಕ್ಕೆ ಅವಕಾಶವಿದೆ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಈಗಾಗಲೇ ಅನೇಕರು ತಾಯಿಯ ದರ್ಶನ ಪಡೆದು, ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಾರತಿ ಸಾಲಿನಲ್ಲಿ ಕಾಯತೋಡಗಿದ್ದಾರೆ.
ಹಾಸನಾಂಬೆ ದೇವಿ ದರುಶನಕ್ಕೆ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಹೆಣ್ಣು ಮಕ್ಕಳಾದ ಅನಸೂಯ, ಶೈಲಜಾ ಜೊತೆ ಆಗಮಿಸಿದ್ದರು. ದೇವೇಗೌಡರ ಕುಟುಂಬದ ಜೊತೆ ಶಾಸಕ ಎಚ್.ಪಿ.ಸ್ವರೂಪ್‌ಪ್ರಕಾಶ್ ಸಹ ಇದ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಆಪ್ತರ ಜೊತೆ ಆಗಮಿಸಿದ್ದರು ಹಾಗೂ ಮಾಜಿಸಚಿವ ಕೆ.ಗೋಪಾಲಯ್ಯ ಸಹ ಕುಟುಂಬ ಸಮೇತರಾಗಿ ಆಗಮಸಿ ದೇವಿಯ ದರ್ಶನ ಪಡೆದರು.
ಹೆಲಿ ಟೂರಿಸಂಗೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಚಾಲನೆ
ಹಾಸನಾಂಬೆ ಉತ್ಸವ ಹಿನ್ನೆಲೆಯಲ್ಲಿ ಆಗಸದಿಂದ ಹಾಸನ ಯೋಜನೆಯ ಹೆಲಿ ಟೂರಿಸಂಗೆ ಡಿಸಿ ಸತ್ಯಭಾಮ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಚಾಲನೆ ನೀಡಿದರು. ಒಬ್ಬರಿಗೆ ಒಂದು ಸುತ್ತಿಗೆ 4300 ದರ ನಿಗದಿಪಡಿಸಲಾಗಿದೆ. ಹಾಸನ ನಗರದ ಮೇಲೆ ಆರು ನಿಮಿಷ ಹಾರಾಟ ನಡೆಸಿ ಹಾಸನಾಂಬೆ ದೇಗುಲ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಇದೇ ಮೊದಲ ಬಾರಿಗೆ ಹಾಸನಾಂಬೆ ಉತ್ಸವ ಹಿನ್ನೆಲೆಯಲ್ಲಿ ಹೆಲಿ ಟೂರಿಸಂ ಆಯೋಜಿಸಲಿದ್ದು, ಹೆಲಿ ಟೂರಿಸಂ ಭಕ್ತರಿಗೆ ವಿಭಿನ್ನ ಅನುಭವ ನೀಡಲಿದೆ.