January16, 2026
Friday, January 16, 2026
spot_img

RCB​ ಮಾಜಿ ನಾಯಕ ಐಪಿಎಲ್ ಹರಾಜಿನಿಂದ ದೂರ: ಭಾವನಾತ್ಮಕ ಪೋಸ್ಟ್ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಆಟಗಾರರ ಮಿನಿ ಹರಾಜು ಡಿಸೆಂಬರ್ 16 ರಂದು ನಿಗದಿಯಾಗಿದ್ದು, ಹಲವು ಪ್ರತಿಭೆಗಳು ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಆದರೆ, ಐಪಿಎಲ್‌ನ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರು ಈ ಬಾರಿ ಹರಾಜಿನಲ್ಲಿ ಭಾಗವಹಿಸದಿರಲು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

40 ವರ್ಷದ ಅನುಭವಿ ಆಟಗಾರ ಡು ಪ್ಲೆಸಿಸ್, ನವೆಂಬರ್ 29 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕರಾದ ಅವರು, “ಐಪಿಎಲ್‌ನಲ್ಲಿ 14 ವರ್ಷಗಳ ಸುದೀರ್ಘ ಪಯಣದ ನಂತರ, ನಾನು ಈ ವರ್ಷ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಇದು ಬಹಳ ದೊಡ್ಡ ಮತ್ತು ಕೃತಜ್ಞತೆಯಿಂದ ತೆಗೆದುಕೊಂಡ ನಿರ್ಧಾರವಾಗಿದೆ,” ಎಂದು ಬರೆದುಕೊಂಡಿದ್ದಾರೆ.

ಡು ಪ್ಲೆಸಿಸ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದು, ಕಳೆದ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಆದರೆ, ಈ ವರ್ಷದ ಹರಾಜಿನ ಮುನ್ನವೇ ಅವರನ್ನು ಡೆಲ್ಲಿ ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ, ಡು ಪ್ಲೆಸಿಸ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ ಫಾಫ್, “14 ವರ್ಷಗಳು ಬಹಳ ದೀರ್ಘ ಅವಧಿ, ಮತ್ತು ಈ ಮೈಲಿಗಲ್ಲನ್ನು ಸಾಧಿಸಿದ್ದು ನನಗೆ ಹೆಮ್ಮೆಯ ವಿಷಯ. ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಮತ್ತು ಇದು ಖಂಡಿತವಾಗಿಯೂ ವಿದಾಯವಲ್ಲ. ನೀವು ನನ್ನನ್ನು ಮತ್ತೆ ನೋಡುತ್ತೀರಿ,” ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಈ ವರ್ಷ ಐಪಿಎಲ್‌ನಿಂದ ದೂರ ಉಳಿದು, ಅವರು ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಹೊಸ ಸವಾಲನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ. ಮುಂಬರುವ ಪಿಎಸ್ಎಲ್ ಸೀಸನ್‌ನಲ್ಲಿ ಆಡುವುದಾಗಿ ಅವರು ತಿಳಿಸಿದ್ದಾರೆ.

Must Read

error: Content is protected !!