ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ನೇಮಕವಾಗಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಆಯ್ಕೆ ದೇವಳದ ಆಡಳಿತ ಕಛೇರಿ ಸಭಾಂಗಣದಲ್ಲಿ ನಡೆಯಿತು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಹರೀಶ್ ಇಂಜಾಡಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಎಮ್‌ಎಲ್‌ಸಿ ಮಂಜುನಾಥ ಭಂಡಾರಿ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಆದರೆ ಹರೀಶ್ಗೆ ಅಧ್ಯಕ್ಷ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರು ವಿರೋಧಿಸಿದ್ದರು.
ಅಲ್ಲದೇ ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಾಣೆ ಆರೋಪಿಸಿ ದಾಖಲೆ ಸಮೇತ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಸುಬ್ರಹ್ಮಣ್ಯ ಗ್ರಾಮಸ್ಥರು ಪತ್ರ ಬರೆದಿದ್ದರು. ಆದರೆ ಗ್ರಾಮಸ್ಥರ ಮನವಿಗೂ ಕ್ಯಾರೆ ಎನ್ನದೇ ಹರೀಶ್ ಇಂಜಾಡಿ ನೇಮಕ ಮಾಡಲಾಗಿದೆ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.