ಆರತಿ ಬೆಳಗುವಾಗ ದುಪ್ಪಟ್ಟಾಗೆ ಬೆಂಕಿ: ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಾಂಗ್ರೆಸ್ ನ ಹಿರಿಯ ನಾಯಕಿ ಮತ್ತು ಕೇಂದ್ರದ ಮಾಜಿ ಸಚಿವೆ ಗಿರಿಜಾ ವ್ಯಾಸ್ ಅವರು ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಮಾರ್ಚ್ 31ರಂದು ತಮ್ಮ ಮನೆಯಲ್ಲಿ ಆರತಿ ಬೆಳಗುವಾಗ ಅವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿತ್ತು. ಇದರಿಂದ ಚೇತರಿಸಿಕೊಳ್ಳದೆ ಇದೀಗ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ವ್ಯಾಸ್ ಅವರ ಸಹೋದರ ಗೋಪಾಲ್ ಶರ್ಮಾ ಪ್ರತಿಕ್ರಿಯಿಸಿ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಗಿರಿಜಾ ವ್ಯಾಸ್ ಅವರು ಇಂದು ಸಂಜೆ ಅಹಮದಾಬಾದ್ ನ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದರು.

ಮನೆಯಲ್ಲಿ ಆರತಿ ಮಾಡುತ್ತಿದ್ದಾಗ ವ್ಯಾಸ್ ಅವರ ದುಪಟ್ಟಾಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಗಂಭೀರ ಸುಟ್ಟ ಗಾಯಗಳಾಗಿದ್ದವು. ತಕ್ಷಣವೇ ಉದಯಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಮೃತದೇಹದ ಅಂತ್ಯಕ್ರಿಯೆ ಶುಕ್ರವಾರ ಉದಯಪುರದಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಗಿರಿಜಾ ವ್ಯಾಸ್ ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿಯಾಗಿದ್ದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರಲ್ಲೂ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯೂ ಆಗಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!