ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಾಜಿ ಅಧ್ಯಕ್ಷ ಜೋ ಬಿಡನ್ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
82 ವರ್ಷದ ಬಿಡನ್ ಅವರ ಮೂಳೆಗಳಿಗೆ ಕ್ಯಾನ್ಸರ್ ಹರಡಿದೆ. ಜೋ ಬಿಡನ್ ಕಚೇರಿ ಭಾನುವಾರ ಈ ಮಾಹಿತಿಯನ್ನು ನೀಡಿದೆ. ಜೋ ಬಿಡನ್ ಅವರ ಗಂಭೀರ ಆರೋಗ್ಯ ಸ್ಥಿತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುಃಖ ವ್ಯಕ್ತಪಡಿಸಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಡೊನಾಲ್ಡ್ ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ, ಬಿಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾದ ಸುದ್ದಿ ಕೇಳಿ ಮೆಲಾನಿಯಾ ಮತ್ತು ನನಗೆ ಇಬ್ಬರಿಗೂ ದುಃಖವಾಗಿದೆ. ಬಿಡನ್ ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ಜೋ ಬಿಡನ್‌ಗೆ ಈಗ 82 ವರ್ಷ, ಅವರಿಗೆ ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆ ಎದುರಾಗಿತ್ತು, ಹಾಗಾಗಿ ಶುಕ್ರವಾರ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ರಿಪೋರ್ಟ್ ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು.
ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, 100 ರಲ್ಲಿ ಸುಮಾರು 13 ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚು. ಈ ಕ್ಯಾನ್ಸರ್ ಪುರುಷರಲ್ಲಿ ಮೂತ್ರಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಕಂಡುಬರುತ್ತದೆ.
ಕೆಲವೊಮ್ಮೆ ಈ ಕ್ಯಾನ್ಸರ್ ನಿಧಾನವಾಗಿ ಬೆಳೆಯುತ್ತದೆ ಮತ್ತು ವರ್ಷಗಳ ನಂತರ ಅದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಆದರೆ ಕೆಲವು ಸಂದರ್ಭಗಳಲ್ಲಿ ಇದು ವೇಗವಾಗಿ ಹರಡುತ್ತದೆ ಮತ್ತು ಮೂಳೆಗಳಂತಹ ದೇಹದ ಇತರ ಭಾಗಗಳನ್ನು ತಲುಪುತ್ತದೆ. ಬೈಡನ್ ಪ್ರಕರಣದಲ್ಲೂ ಕ್ಯಾನ್ಸರ್ ಮೂಳೆಗಳಿಗೆ ಹರಡಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.