ಹೊಸದಿಗಂತ ವರದಿ ಕಲಬುರಗಿ :
ಸೇಡಂ ತಾಲೂಕಿನ 160 ಕೋಟಿ ರೂ. ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ, 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೇಡಂ ನೂತನ ಬಸ್ ನಿಲ್ದಾಣ, ಹೊಸ ಬಸ್‍ಗಳಿಗೆ ಚಾಲನೆ, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಸುಮಾರು 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾ.28 ರಂದು ಸೇಡಂ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ಭಾನುವಾರ ನಗರದ ಕೆ.ಕೆ.ಆರ್.ಟಿ.ಸಿ. ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಕಾಗಿಣಾ ಏತ ನೀರಾವರಿ ಯೋಜನೆಯಿಂದ 40 ಹಳ್ಳಿಗಳ 75 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. 660 ಕೋಟಿ ರೂ. ಮೊತ್ತದ ಈ ಯೋಜನೆಗೆ ಮೊದಲನೇ ಹಂತವಾಗಿ 160 ಕೋಟಿ ರೂ. ಗಳಿಗೆ ಚಾಲನೆ ನೀಡಲಾಗುತ್ತಿದೆ. ಇದಲ್ಲದೆ ಸನ್ನತ್ತಿ ಬ್ಯಾರೇಜಿನಿಂದ 54 ಕೆರೆಗಳನ್ನು ತುಂಬಿಸುವ 592 ಕೋಟಿ ರೂ. ಮೊತ್ತ ಡಿ.ಪಿ.ಆರ್. ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
10 ಕೋಟಿ ರೂ. ವೆಚ್ಚದ ನೂತನ ಕಾರ್ಯಸೌಧ (ಮಿನಿ ವಿಧಾನ ಸೌಧ) ಸಹ ಉದ್ಘಾಟನೆಯಾಗಲಿದೆ. ಜೆ.ಜೆ.ಎಂ. (ಮನೆ ಮನೆಗೆ ಗಂಗೆ) ಯೋಜನೆಯಡಿ 193 ಕೋಟಿ ರೂ. ವೆಚ್ಚದ ಕಾಮಗಾರಿಗಳು ಮುಗಿದಿದ್ದು, ಇದಕ್ಕೆ ಅಂದು ಚಾಲನೆ ನೀಡಲಾಗುವುದು. ಹೊಸದಾಗಿ 120 ಕೋಟಿ ರೂ. ಮೊತ್ತದ 78 ಕಾಮಗಾರಿಗೆ ಶಂಕುಸ್ಥಾಪನೆ ಸಹ ನೆರವೇರಿಸಲಾಗುವುದು. 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಾಜ್ಯ ಹೆದಾರಿ ರಸ್ತೆ ಲೋಕಾರ್ಪಣೆ ಮತ್ತು 41 ಕೋಟಿ ರೂ. ವೆಚ್ಚದ ಹೊಸ ರಸ್ತೆಗೆ ಅಡಿಗಲ್ಲು ಹಾಕಲಾಗುವುದು. 81 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ಯಾರೇಜ್, 100 ಕೋಟಿ ರೂ. ವೆಚ್ಚದ 200 ಶಾಲಾ ಕೊಠಡಿ, 30 ಕೋಟಿ ರೂ. ವೆಚ್ಚದ ವಸತಿ ಶಾಲೆ ಲೋಕಾರ್ಪಣೆಯಾಗಲಿದೆ. ಒಟ್ಟಾರೆ ಸೇಡಂ ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಗಮಿಸಲಿದ್ದು, ಮುಖ್ಯಮಂತ್ರಿಗಳು ಸಹ ಬರುವ ಸಾಧ್ಯತೆ ಇದೆ ಎಂದರು.