ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ತಾಲ್ಲೂಕಿನ ಹೊಸತೇಗೂರ ಸಮೀಪದ ಓಲ್ಡ್ ಮುಲ್ಲಾ ಡಾಬಾದಲ್ಲಿ ಕೆಲಸಗಾರ ಅರುಣಕುಮಾರ ಅವರನ್ನು ಸರಪಳಿಯಿಂದ ಕಟ್ಟಿಹಾಕಿ ಕೆಲಸ ಮಾಡಿಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರನ್ನು ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಮಹಮ್ಮದ್ ಅಬೂಬುಕರ್, ತಫೂರ್, ಬೆಳಗಾವಿ ಜಿಲ್ಲೆ ಕಿತ್ತೂರಿನ ಮಂಜುನಾಥ ಮಾರುತಿ ಉಪ್ಪಾರ್ ಹಾಗೂ ಬೈಲಹೊಂಗಲದ ಶಾನೂರ ಬಂಧಿತರು. ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಕಟಾಪೂರದ ಅರುಣಕುಮಾರ ಪುತ್ರಿಯ ಮದುವೆಗೆ ಡಾಬಾ ಮಾಲೀಕ ಮಹಮ್ಮದ್ ಅಬೂಬುಕರ್ ಮತ್ತು ಅವರ ಮಾವ ತೈಫೂರ್ ಅವರಿಂದ 1 ಲಕ್ಷ ಸಾಲ ಪಡೆದಿದ್ದರು. ಅರುಣಕುಮಾರ ಡಾಬಾದಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದ. 20 ದಿನಗಳ ಹಿಂದೆ ಬೇರೆ ಕಡೆಗೆ ಅರುಣಕುಮಾರ ಕೆಲಸಕ್ಕೆ ಹೋಗುತ್ತಾನೆ ಎಂದು ತಿಳಿದು ಅಬೂಬುಕರ್, ತೈಫೂರ್ ಅವರು ಡಾಬಾ ಮ್ಯಾನೇಜರ್ ಮಂಜುನಾಥ ಮತ್ತು ನೌಕರ ಶಾನೂರ ಸಹಾಯದಿಂದ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದರು.
ಮೊದಲು, ಸರಪಳಿಯಲ್ಲಿರುವ ವ್ಯಕ್ತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಲಾಗುತ್ತಿತ್ತು, ಆದರೆ ಈಗ ಅದು ಹಣಕಾಸಿನ ವಿವಾದದ ಪ್ರಕರಣವಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೋಪಾಲ್ ಬೈಕೋಡ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಾಥಮಿಕ ವಿಚಾರಣೆ ನಡೆಸಿದರು.