Tuesday, October 21, 2025

ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ದರೋಡೆ: ನಾಲ್ವರು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದಲ್ಲಿ ನಡೆದ ಬೆದರಿಕೆ ಹಾಗೂ ದರೋಡೆ ಪ್ರಕರಣಕ್ಕೆ ಪೀಣ್ಯ ಪೊಲೀಸರು ತೆರೆ ಎಳೆದಿದ್ದಾರೆ. ವಿಜಯನಗರ ಜಿಲ್ಲೆಯ ಗುತ್ತಿಗೆದಾರನನ್ನು ಕಾರಿಗೆ ಹತ್ತಿಸಿಕೊಂಡು ಪಿಸ್ತೂಲ್ ತೋರಿಸಿ ಹಣ ಮತ್ತು ಮೊಬೈಲ್ ಸುಲಿಗೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸ್ಥಳೀಯರಲ್ಲೂ ಆತಂಕ ಮೂಡಿಸಿತ್ತು.

ಹೊಸಪೇಟೆಯ ಗುತ್ತಿಗೆದಾರರು ಸೆಪ್ಟೆಂಬರ್ 18ರಂದು ಪೀಣ್ಯ ಬಳಿ ಬಸ್ಸಿಗೆ ಕಾಯುತ್ತಿರುವ ವೇಳೆ, ಆರೋಪಿಗಳು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ದಾಬಸಪೇಟೆ ಬಳಿಯಲ್ಲಿ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದರು. ಬಳಿಕ 75 ಸಾವಿರ ಮೌಲ್ಯದ ಐಫೋನ್ ಮತ್ತು 5 ಸಾವಿರ ನಗದು ದೋಚಿ, ಅವರನ್ನು ರಸ್ತೆಯ ಪಕ್ಕಕ್ಕೆ ಇಳಿಸಿ ಪರಾರಿಯಾಗಿದ್ದರು.

ಕೃತ್ಯ ನಡೆದ ಎರಡು ದಿನಗಳ ಬಳಿಕ ಪೀಣ್ಯ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು. ದೂರಿನನ್ವಯ ವಿಜಯಪುರ ಮೂಲದ ಕನಕಮೂರ್ತಿ, ಕಿರಣ್, ಶ್ರೀಕಾಂತ್ ಮತ್ತು ಮಲ್ಲನ್‌ ಸಾಬ್ ಶೇಕ್ ನನ್ನು ಪೊಲೀಸರು ಬಂಧಿಸಿದರು. ಬಂಧಿತರಿಂದ ನಾಡ ಪಿಸ್ತೂಲ್, ಕಾರು, ಮೊಬೈಲ್ ಸೇರಿದಂತೆ 4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಮೂವರು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಇಟ್ಟಿಗೆ ಕಾರ್ಖಾನೆ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಜಯಪುರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ನಗರಕ್ಕೆ ಬಂದು ಹೊಸ ಅಪರಾಧ ಜಾಲ ಹುಟ್ಟುಹಾಕಿದ್ದರು.

error: Content is protected !!