ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿದೇಶಾಂಗ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ರಾಷ್ಟ್ರಗಳನ್ನು ಒಳಗೊಂಡ ಈ ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಜೋರ್ಡಾನ್‌ಗೆ ಆಗಮಿಸಿದ್ದಾರೆ. ಅಮ್ಮನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಜೋರ್ಡಾನ್ ಪ್ರಧಾನಿ ಡಾ. ಜಾಫರ್ ಹಸನ್ ಖುದ್ದಾಗಿ ಸ್ವಾಗತಿಸಿದ್ದು, ಈ ಭೇಟಿ ಎರಡೂ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧಗಳ ಮಹತ್ವವನ್ನು ಪ್ರತಿಬಿಂಬಿಸಿದೆ.
ಜೋರ್ಡಾನ್‌ನ ರಾಜ ಕಿಂಗ್ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಈ ದೇಶಕ್ಕೆ ಬಂದಿದ್ದಾರೆ. ಈ ಅವಧಿಯಲ್ಲಿ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದ್ದು, ವ್ಯಾಪಾರ, ಹೂಡಿಕೆ, ರಕ್ಷಣಾ ಸಹಕಾರ, ಇಂಧನ, ಶಿಕ್ಷಣ ಮತ್ತು ಪ್ರಾದೇಶಿಕ ಭದ್ರತೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ.
ಜೋರ್ಡಾನ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಇಥಿಯೋಪಿಯಾ ಹಾಗೂ ಓಮನ್‌ಗೆ ಭೇಟಿ ನೀಡಲಿದ್ದಾರೆ. ಆ ರಾಷ್ಟ್ರಗಳಲ್ಲಿಯೂ ಉನ್ನತ ಮಟ್ಟದ ಸಭೆಗಳು, ಒಪ್ಪಂದಗಳು ಹಾಗೂ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಯುವ ಸಾಧ್ಯತೆ ಇದೆ.

