ನಾಲ್ಕು ದಿನಗಳ ಭಾರತ ಪ್ರವಾಸ: ದೆಹಲಿಗೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸಕ್ಕೆ ಮುಂದಾಗಿದ್ದು, ದೆಹಲಿಗೆ ಬಂದಿಳಿದಿದ್ದಾರೆ. ಭಾರತಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.

ಇಂದು ಬೆಳಗ್ಗೆ 9.30ರ ಸುಮಾರಿಗೆ ಪಾಲಂ ವಾಯುನೆಲೆಯಲ್ಲಿ ಇಳಿದ ಅವರಿಗೆ ಸರ್ಕಾರಿ ಗೌರವದ ಮೂಲಕ ಔಪಚಾರಿಕವಾಗಿ ಅದ್ದೂರಿ ಸ್ವಾಗತ ಕೋರಲಾಯಿತು. ಇಂದು ಸಂಜೆ ಸುಮಾರು 6.30ಕ್ಕೆ ಉಪರಾಷ್ಟ್ರಪತಿ ಜೊತೆ 7ಕ್ಕೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅವರ ಅಧಿಕೃತ ನಿವಾಸದಲ್ಲಿ ಔಪಚಾರಿಕ ಸಭೆ ನಡೆಸಲಿದ್ದಾರೆ.

ಈ ವೇಳೆ ಅವರು ಎರಡು ದೇಶಗಳ ನಡುವಿನ ಆರ್ಥಿಕತೆ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಇದಾದ ಬಳಿಕ ವ್ಯಾನ್ಸ್​​ ಕುಟುಂಬ ಮಂಗಳವಾರ ಜೈಪುರಕ್ಕೆ ಬಳಿಕ ಏಪ್ರಿಲ್​ 23ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.

ಆಗ್ರಾಕ್ಕೆ ಭೇಟಿ ನೀಡಲಿರುವ ಉಪಾಧ್ಯಕ್ಷ ವ್ಯಾನ್ಸ್ ಕುಟುಂಬ ವಿಶ್ವಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲ್ ಸೌಂದರ್ಯವನ್ನು ಆಹ್ಲಾದಿಸಲಿದ್ದಾರೆ. 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡೊನಾಲ್ಡ್​ ಟ್ರಂಪ್​ ಕೂಡ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದರು.

ವ್ಯಾನ್ಸ್​​ ಕುಟುಂಬದ ಆಗಮನದ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಿಷ್ಟಾಚಾರದ ಅನುಸಾರ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಯಾವುದೇ ಲೋಪ ಅಥವಾ ಅಹಿತಕರ ಘಟನೆಯಾಗದಂತೆ ನಿಗಾ ವಹಿಸಲಾಗಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!