ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಅಪಘಾತದಲ್ಲಿ ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಸಹೋದರ, ನಿರ್ಮಾಪಕ ಎಸ್. ಎ ಶ್ರೀನಿವಾಸ್ ಪುತ್ರ ,ನಟ ಧ್ರುವನ್ (Dhruvan) ಅಲಿಯಾಸ್ ಸೂರಜ್ (Suraj) ತೀವ್ರವಾಗಿ ಗಾಯಗೊಂಡಿದ್ದರು. ಬಲಗಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಕಾಲು ಕತ್ತರಿಸುವುದು ವೈದ್ಯರಿಗೆ ಅನಿವಾರ್ಯವಾಗಿತ್ತು. ಈ ಕುರಿತು ಮಣಿಪಾಲ್ ಆಸ್ಪತ್ರೆಯ ವೈದ್ಯ ಅಜಯ್ ಹೆಗಡೆ (Ajay Hegde) ಮಾಹಿತಿ ನೀಡಿದ್ದಾರೆ.
‘ಸೂರಜ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಬಲಗಾಲಿನಲ್ಲಿ ತೀವ್ರ ರಕ್ತಸ್ರಾವ ಆಗಿತ್ತು. ಬಲ ಮೊಣಕಾಲಿಗೆ ಸಾಕಷ್ಟು ಏಟು ಬಿದ್ದಿರುವುದರಿಂದ ಕತ್ತರಿಸಿ ತೆಗೆಯುವುದು ಅನಿವಾರ್ಯವಾಗಿತ್ತು. ಅಪಘಾತದ ದಿನ ಅವರನ್ನು ವೆಂಟಿಲೇಟರ್ ನಲ್ಲೇ ಇಟ್ಟು ಚಿಕಿತ್ಸೆ ನೀಡಲಾಯಿತು. ಕಾಲಿನಲ್ಲಿ 6 ಇಂಚಿನಷ್ಟು ಜಾಗದಲ್ಲಿ ಮೂಳೆ ಹಾಗೂ ನರಗಳೇ ಇರಲಿಲ್ಲ. ಜಜ್ಜಿ ಹೋಗಿದ್ದವು. ಕಾಲಿನ ಭಾಗ ಕತ್ತರಿಸಿ ತೆಗೆದಿದ್ದನ್ನು ನಾಲ್ಕು ದಿನಗಳ ಬಳಿಕ ಅವರಿಗೆ ಹೇಳಲಾಯಿತು’ ಎಂದಿದ್ದಾರೆ.
ಒಟ್ಟು ನಾಲ್ಕರಿಂದ ಐದು ತಾಸುಗಳ ಕಾಲ ಸೂರಜ್ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇನ್ನೂ ಕೆಲವು ತಿಂಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. ಪ್ರಸ್ತುತ ಹಿಮೋಗ್ಲೋಬಿಕ್ ಕೊರತೆಯಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದರು.
ನಟ ಸೂರಜ್ (ಧ್ರುವನ್) ಬುಲೆಟ್ ನಲ್ಲಿ ಊಟಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಮಾರ್ಗಮಧ್ಯೆ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಮುಂದಿನಿಂದ ಬಂದ ಟಿಪ್ಪರ್ ಸೂರಜ್ ಮೇಲೆ ಹರಿದಿದೆ ಎಂದು ಹೇಳಲಾಗುತ್ತಿದೆ. ಚಾಮರಾಜನಗರ ಬೇಗೂರು (ಗುಂಡ್ಲುಪೇಟೆ) ಸಮೀಪದ ಹಿರಿಕಾಟಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಬೈಕ್ ಸವಾರ ಸೂರಜ್ ತೀವ್ರವಾಗಿ ಗಾಯಗೊಂಡಿದ್ದರು.