ಮುರುಡೇಶ್ವರದಲ್ಲಿ ನೀರುಪಾಲಾದ ನಾಲ್ವರು ವಿದ್ಯಾರ್ಥಿನಿಯರು: ಓರ್ವ ಸಾವು, ಮೂವರ ರಕ್ಷಣೆ

ಹೊಸದಿಗಂತ ವರದಿ, ಭಟ್ಕಳ :

ಮುರ್ಡೇಶ್ವರದಲ್ಲಿ ಈಜಲು ಇಳಿದಿದ್ದ ಏಳು ಮಂದಿ ಪ್ರವಾಸಿ ವಿದ್ಯಾರ್ಥಿನಿಯರ ಪೈಕಿ ನಾಲ್ವರು ನೀರುಪಾಲಾದರೆ, ಮೂವರನ್ನು ಲೈಪ್ ಗಾರ್ಡ ಸಿಬ್ಬಂದಿಗಳು ರಕ್ಷಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ (೧೫) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದೇ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷೀತಾ(೧೫), ಲಾವಣ್ಯ (೧೫) ಹಾಗೂ ಲಿಫಿಕಾ (೧೫)ಅವರು ಸಮುದ್ರದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದಾರೆ. ನೀರಲ್ಲಿ ಕೊಚ್ಚಿ ಹೋಗಿ ಲೈಪ್ ಗಾರ್ಡ ಸಿಬ್ಬಂದಿಗಳಿಂದ ಬಚಾವ್ ಆದ ಮೂವರು ವಿದ್ಯಾರ್ಥಿನಿಯರಾದ ಯಶೋದಾ (೧೫) ವೀಕ್ಷಣಾ (೧೫) ಹಾಗೂ ಲಿಪಿಕಾ (೧೫) ಮುರ್ಡೇಶ್ವರ ಆರೆನ್ನೆಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಗ್ರಾಮದ ಮೋರಾರ್ಜಿ ವಸತಿ ಶಾಲೆಯ ೫೪ ವಿದ್ಯಾರ್ಥಿಗಳು ಮಂಗಳವಾರ ಶೈಕ್ಷಣಿಕ ಪ್ರವಾಸಕ್ಕಾಗಿ ಮುರ್ಡೇಶ್ವರ ಬಂದಿದ್ದು, ಮಂಗಳವಾರ ಸಂಜೆ ದೇವರ ದರ್ಶನ ಮುಗಿಸಿ ಸಮುದ್ರಲ್ಲಿ ಆಟವಾಡುತ್ತಿರುವಾಗ ೭ ವಿದ್ಯಾರ್ಥಿನಿಯರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಆಳ ಸಮುದ್ರದಲ್ಲಿ ಮುಳುಗುತ್ತಿರುವಾಗ ಇದನ್ನು ಗಮನಿಸಿದ ಲೈಪ ಗಾರ್ಡ ಸಿಬ್ಬಂದಿಗಳು ಮೂವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಮುರ್ಡೇಶ್ವರ ಪಿ.ಎಸ್.ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಕರಾವಳಿ ಪೊಲೀಸ್ ಪಡೆ ಸಿಬ್ಬಂದಿಗಳು ಕಣ್ಮರೆಯಾದವರಿಗಾಗಿ ತೀವ್ರ ಹುಟುಕಾಟ ನಡೆಸುತ್ತಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತೆ ಡಾ. ನಯನಾ ಮತ್ತು ತಹಸೀಲ್ದಾರ ಅಶೋಕ ಭಟ್ಟ ಅವರು ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ಚಿಕಿತ್ಸೆಗೆ ದಾಖಲಾದ ಮುರ್ಡೇಶ್ವರ ಆರೆನ್ನೆಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಅದರಂತೆ ಇವರೊಂದಿಗೆ ಪ್ರವಾಸಕ್ಕೆ ಬಂದಿದ್ದ ವಸತಿ ಶಾಲೆಯ ಶಿಕ್ಷಕರಲ್ಲಿ ಉಳಿದ ವಿದ್ಯಾರ್ಥಿಗಳ ಕುರಿತು ಮಾಹಿತಿ ಕಲೆ ಹಾಕಿ ಅವರಿಗೆಲ್ಲರಿಗೂ ರಾತ್ರಿ ವಸತಿ ವ್ಯವಸ್ಥೆ ಸೇರಿಂದ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!