ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಅಪರಿಚಿತ ದಾಳಿಕೋರರು ಕುಕಿ ಬಂಡುಕೋರ ನಾಯಕನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಅಂಗರಕ್ಷಕರನ್ನು ಮತ್ತು ಒಬ್ಬ ವೃದ್ಧ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಚುರಾಚಂದ್‌ಪುರ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಮೊಂಗ್‌ಜಾಂಗ್ ಗ್ರಾಮದ ಬಳಿಯ ಜೆಸಾಮಿ ರಸ್ತೆಯಲ್ಲಿ ಇಂದು ಮಧ್ಯಾಹ್ನ ಈ ಗುಂಡಿನ ದಾಳಿ ನಡೆದಿದೆ.
ಕುಕಿ ರಾಷ್ಟ್ರೀಯ ಸೇನೆಯ(ಕೆಎನ್‌ಎ) ಉಪ ಕಮಾಂಡರ್-ಇನ್-ಚೀಫ್ ಥಾಪಿ ಹಾವೋಕಿಪ್ ಅವರು ತಮ್ಮ ಇಬ್ಬರು ಅಂಗರಕ್ಷಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಕಾರಿನಲ್ಲಿ ಈ ಮೂವರು ಹಾಗೂ ಇತರ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.
ಈ ಘಟನೆ ಬಣಗಳ ವೈಷಮ್ಯಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಯಾವುದೇ ಗುಂಪು ಇದುವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಯ ನಂತರ, ಪರಿಸ್ಥಿತಿ ಉಲ್ಬಣಗೊಳ್ಳುವ ಭೀತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿವೆ.