ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳಿ ದಾಟಲು ಯತ್ನಿಸುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ.
ಬರೌನಿ-ಕತಿಹಾರ್ ರೈಲ್ವೆ ಮಾರ್ಗದ ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ಪ್ರದೇಶದ ಉಮೇಶ್‌ನಗರ ಸ್ಟೇಷನ್ ಕ್ರಾಸಿಂಗ್ ಬಳಿ ಬುಧವಾರ ತಡರಾತ್ರಿ ಘಟನೆ ಸಂಭವಿಸಿದೆ. ರಾಹುವಾ ಗ್ರಾಮದ ನಾಲ್ವರು ನಿವಾಸಿಗಳು ಹತ್ತಿರಘುನಾಥಪುರ ಗ್ರಾಮದಲ್ಲಿ ನಡೆದ ಕಾಳಿಪೂಜಾ ಜಾತ್ರೆಯಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಅಮ್ರಪಾಲಿ ಎಕ್ಸ್‌ಪ್ರೆಸ್ ಹಾದುಹೋಗಿದ್ದು, ಹಳಿ ದಾಟುತ್ತಿದ್ದವರಿಗೆ ಡಿಕ್ಕಿಯಾಗಿದೆ.
ಮೃತರನ್ನು ರೀತಾ ದೇವಿ (40), ಅವರ ಮಗಳು ರೋಶ್ನಿ ಕುಮಾರಿ (14), ಏಳು ವರ್ಷದ ಆರೋಹಿ ಕುಮಾರಿ (7) ಮತ್ತು ಅವರ ಚಿಕ್ಕಪ್ಪ ಧರ್ಮ ದೇವ್ ಮಹ್ತೊ (35) ಎಂದು ಗುರುತಿಸಲಾಗಿದೆ. ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಹುವಾ ಗ್ರಾಮದ ನಿವಾಸಿಗಳಾಗಿದ್ದು, ಒಂದೇ ಕುಟುಂಬದವರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ರಘುನಾಥಪುರ ಗ್ರಾಮದಲ್ಲಿ ನಡೆದ ಕಾಳಿ ಪೂಜಾ ಜಾತ್ರೆಯಲ್ಲಿ ಭಾಗವಹಿಸಿದ ಜನರು ತಮ್ಮ ಗ್ರಾಮವಾದ ರಾಹುವಾಗೆ ಹಿಂತಿರುಗುತ್ತಿದ್ದರು. ಜನರು ಸಾಮಾನ್ಯವಾಗಿ ರಾಹುವಾಗೆ ಹೋಗಲು ರೈಲ್ವೆ ಹಳಿಯ ಪಕ್ಕದ ಮಾರ್ಗವನ್ನು ಬಳಸುತ್ತಾರೆ. ಈ ಮಧ್ಯೆ ಹಳಿ ದಾಟುತ್ತಿದ್ದ ಅವರಿಗೆ, ವೇಗವಾಗಿ ಬರುತ್ತಿದ್ದ ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ ಇತರರು ಸಹ ಹಳಿ ದಾಟುತ್ತಿದ್ದರು, ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

