ಕೊಡಗು ಜಿಲ್ಲೆಯ ನಾಲ್ಕು ತಾಲೂಕುಗಳು ಬರ ಪೀಡಿತ

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯ ನಾಲ್ಕು ತಾಲೂಕುಗಳು ಸೇರಿದಂತೆ ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿ ಸರಕಾರ ಆದೇಶ ಹೊರಡಿಸಿದೆ.
ಕೊಡಗು ಜಿಲ್ಲೆಯ ಐದು ತಾಲೂಕುಗಳ ಪೈಕಿ ಮಡಿಕೇರಿ, ವೀರಾಜಪೇಟೆ ಹಾಗೂ ಕುಶಾಲನಗರ ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು ಸೋಮವಾರಪೇಟೆ ತಾಲೂಕನ್ನು ಸಾಧಾರಣ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಪೊನ್ನಂಪೇಟೆ ತಾಲೂಕನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ.

ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳು ನಡೆಸಿದ ಬೆಳಹಾನಿ ಸಮೀಕ್ಷೆಯ ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರಕಾರದ ಜಂಟಿ ಕಾರ್ಯದರ್ಶಿ ಟಿ.ಸಿ. ಕಾಂತರಾಜ್ ಆದೇಶಿಸಿದ್ದಾರೆ.

ಈ ಅದೇಶವು ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರಲಿದ್ದು, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಸರಕಾರವು ಕಾಲಕಾಲಕ್ಕೆ ನೀಡುವ ಎಸ್ ಡಿಆರ್ ಎಫ್ ಮತ್ತು ಎನ್‌ ಡಿಆರ್ ಎಫ್ ಮಾರ್ಗಸೂಚಿಗಳ ಅನ್ವಯ ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!