ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚುನಾವಣೆ ಎಂದರೆ ಗಲಭೆ.. ಗಲಭೆ ಎಂದರೆ ಚುನಾವಣೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಾಮಪತ್ರ ಸಲ್ಲಿಕೆ ಆರಂಭವಾದ ದಿನದಿಂದಲೂ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆಯುತ್ತಿದೆ. ಈ ಗಲಭೆಗಳಲ್ಲಿ ಚಾಕು ಮತ್ತು ಬಾಂಬ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಚುನಾವಣಾ ಪ್ರಚಾರ ಮುಗಿದು ಎರಡು ದಿನಗಳಾಗಿವೆ. ಕಳೆದೆರಡು ದಿನಗಳಿಂದ ವಾತಾವರಣ ಕೊಂಚ ಶಾಂತವಾದಂತೆ ಕಂಡರೂ ಶನಿವಾರ ಮತದಾನ ಆರಂಭವಾಗುವ ಮುನ್ನವೇ ರಾಜ್ಯದಲ್ಲಿ ಗಲಭೆ ಶುರುವಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಈ ಘರ್ಷಣೆಯಲ್ಲಿ ನಾಲ್ವರು ಟಿಎಂಸಿ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಮುರ್ಷಿದಾಬಾದ್ ಜಿಲ್ಲೆಯಲ್ಲಿ ಗಲಭೆಗಳು ಅತ್ಯಂತ ಕೆಟ್ಟ ಮಟ್ಟಕ್ಕೆ ತಲುಪಿವೆ. ಕಪಾಸ್ದಂಗ ಪ್ರದೇಶದಲ್ಲಿ ಬಾಬರ್ ಅಲಿ ಎಂಬ ಟಿಎಂಸಿ ಕಾರ್ಯಕರ್ತ ನಿಧನರಾದರು. ರೆಜಿನಗರ ಪ್ರದೇಶದಲ್ಲಿ ಬಾಂಬ್ ದಾಳಿಯಲ್ಲಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದಾನೆ. ಖರಗ್ರಾಮ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನನ್ನು ಇರಿದು ಹತ್ಯೆ ಮಾಡಲಾಗಿದೆ. ರಾಂಪುರ ಪ್ರದೇಶದಲ್ಲಿ ಗಣೇಶ್ ಸರ್ಕಾರ್ ಎಂಬ ಟಿಎಂಸಿ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ರಾಜ್ಯದಲ್ಲಿ ಹಲವು ದಿನಗಳಿಂದ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಕೇಂದ್ರ ಸಶಸ್ತ್ರ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿ ಪಂಚಾಯತ್ ಚುನಾವಣೆಗೆ ಮತದಾನ ಆರಂಭವಾಗಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ನಡೆಯುವ ಮತದಾನ ಪಕ್ಷಗಳ ಬಲವನ್ನು ಬಹಿರಂಗಪಡಿಸಲಿದೆ. ಪಂಚಾಯತ್ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಜುಲೈ 11 ರಂದು ಮತ ಎಣಿಕೆ ನಡೆಯಲಿದೆ.