ಹೊಸದಿಗಂತ ಡಿಜಿಟಲ್ ಡೆಸ್ಕ್:
25 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಣಾ ಕಾರ್ಯ ಇದೀಗ ದುರಂತ ಅಂತ್ಯ ಕಂಡಿದೆ.
ಮಧ್ಯಪ್ರದೇಶದ ರಾಜ್‌ಗಢದ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಬಾಲಕಿಯನ್ನು ಸುಮಾರು ಒಂಬತ್ತು ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿತ್ತು. ಆದರೆ ರಕ್ಷಿಸಿದ ಕೆಲವೇ ಗಂಟೆಗಳಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ನರಸಿಂಗಗಢ ವ್ಯಾಪ್ತಿಯ ಪಿಪಾಳ್ಯ ರಸೋಡ ಗ್ರಾಮದಲ್ಲಿ ಅಜ್ಜನೊಂದಿಗೆ ಜಮೀನಿಗೆ ತೆರಳಿದ್ದ ಬಾಲಕಿ ಮಾಹಿ ಮಕ್ಕಳೊಂದಿಗೆ ಆಟವಾಡುವ ವೇಳೆ 25 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದಳು.
ತಕ್ಷಣವೇ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸತತ ಒಂಬತ್ತು ಗಂಟೆಗಳ ಪರಿಶ್ರಮದ ನಂತರ ಮಾಹಿಯನ್ನು ಸುರಕ್ಷಿತವಾಗಿ ಮೇಲೆ ತರಲಾಗಿತ್ತು. ಬಳಿಕ ಪಚೋರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸೇರಿದ್ದರು.
ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಪಚೋರ್‌ನಿಂದ ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಅಧಿಕಾರಿ ಡಾ.ಕಿರಣ್ ವಾಡಿಯಾ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಬಾಲಕಿಯ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.