ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ನಗರದ ಬಡಾವಣೆಯೊಂದರಲ್ಲಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ ಆರೋಪದ ಮೇಲೆ ನಾಲ್ಕು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ದೇಚೂರಿನಲ್ಲಿ ಗಾಂಜಾ ಸೇವನೆಯಲ್ಲಿ ತೊಡಗಿದ್ದ ಕರ್ಣಂಗೇರಿಯ ಹೆಚ್.ಎಸ್.ಪ್ರತಾಪ್(22)
ಇಬ್ನಿವಳವಾಡಿಯ ಐ.ಆರ್.ಮೋನಿಶ್(20),ಕರ್ಣಂಗೇರಿ ಮೂರನೇ ಮೈಲು ನಿವಾಸಿ ಡಿ.ಲಿಖಿತ್ (23) ಹಾಗೂ ಇದೇ ಗ್ರಾಮದ ಪಿ.ಎಸ್.ಅಕ್ಷಯ್ (23) ಬಂಧಿತ ಆರೋಪಿಗಳು.
ಆರೋಪಿಗಳ ಪೈಕಿ ಪ್ರತಾಪ್ ಹಾಗೂ ಲಿಖಿತ್ ಡೆಕೋರೇಷನ್ ವೃತ್ತಿಯವರಾಗಿದ್ದರೆ, ಅಕ್ಷಯ್ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದುದಾಗಿ ಹೇಳಲಾಗಿದೆ.
ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಡಿವೈಎಸ್ಪಿ ಗಂಗಾಧರಪ್ಪ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಗರ ಠಾಣೆಯ ಪಿಎಸ್ಐ ಎಂ.ಶ್ರೀನಿವಾಸ್ ಹಾಗೂ ಅಪರಾಧ ವಿಭಾಗದ ಪಿಎಸ್ಐ ಎ.ಬಿ.ರಾಧಾ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ನಡೆಸಿದ ತನಿಖೆಯ ಸಂದರ್ಭ ದೇಚೂರಿನಲ್ಲಿ ಗಾಂಜಾ ಸೇವನೆ ನಡೆಯುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ನಡೆಸಲಾಯಿತು.
ಪ್ರಕರಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರರಾಜ್ ಅವರು ಶ್ಲಾಘಿಸಿದ್ದಾರೆ.