ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಫಾಕ್ಸ್‌ಕಾನ್ ಸಂಸ್ಥೆ ಐಫೋನ್ ಫ್ಯಾಕ್ಟರಿ ನಿರ್ಮಾಣವಾಗಿದೆ. ಸದ್ಯ ಈ ಐಫೋನ್ ಫ್ಯಾಕ್ಟರಿಯಲ್ಲಿ ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ವರದಿಗಳ ಪ್ರಕಾರ ಬರೋಬ್ಬರಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳೋ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನೂ ಈ ವಿಶಾಲ ಫ್ಯಾಕ್ಟರಿಯಲ್ಲಿ ಶೇ. 80ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ. ಎಲ್ಲರೂ ಎಂಟ್ರಿ ಏಜ್ ಲೆವೆಲ್ನಲ್ಲಿದ್ದು, ಐಫೋನ್ ಫ್ಯಾಕ್ಟರಿಗೆ ನೇಮಕವಾಗಿದವರ ಪೈಕಿ ಹೆಚ್ಚಿನವರು ಕೇವಲ 19-24 ವಯೋಮಾನದವರು ಆಗಿದ್ದಾರೆ ಎನ್ನಲಾಗಿದೆ.
ಪಿಯುಸಿ, ಡಿಪ್ಲೊಮಾ ಮಾಡಿರೋ ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆರು ತಿಂಗಳು ಟ್ರೈನಿಂಗ್ ನೀಡಿ ಐಫೋನ್ ಪ್ರೊಡಕ್ಷನ್ ಯುನಿಟ್ಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇಷ್ಟೇ ಅಲ್ಲ ಕೆಲಸ ಮಾಡುತ್ತಿರೋರಿಗೆ ಟೌನ್ಶಿಪ್ ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಈ ವರ್ಷದ ಏಪ್ರಿಲ್ ನಿಂದ ನೇಮಕಾತಿ ಮಾಡಿಕೊಳ್ಳಲಾಗಿದೆ. ನೆರೆಹೊರೆಯ ರಾಜ್ಯಗಳಿಂದ ಇಂಜಿನಿಯರ್ ಗಳು ಬಂದು ದೇವನಹಳ್ಳಿ ಯೂನಿಟ್ ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ. ಈಗಾಗಲೇ ದೇವನಹಳ್ಳಿ ಯೂನಿಟ್ ಆ್ಯಪಲ್ ಐಪೋನ್ 16 ಉತ್ಪಾದನೆ ಕೂಡ ಆರಂಭವಾಗಿದೆ.
300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಘಟಕ 50,000 ಮಂದಿಗೆ ಕೆಲಸ ಮಾಡುವಷ್ಟು ವಿಶಾಲವಾಗಿದೆ. ಮುಂದಿನ ವರ್ಷಕ್ಕೆ ಭರ್ತಿ 50 ಸಾವಿರ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಸದ್ಯ ದೊಡ್ಡದಾದ ಡಾರ್ಮೆಟರಿ ಗಳಲ್ಲಿ ಉದ್ಯೋಗಿಗಳು ವಾಸ ಇದ್ದು, ಮುಂದಿನ ವರ್ಷ ನೌಕರರ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತೆ.
ತಮಿಳುನಾಡಿನಲ್ಲಿರುವ ಐಫೋನ್ ಫ್ಯಾಕ್ಟರಿಗಿಂತಲೂ ಇದು ದೊಡ್ಡದಾಗಿದೆ. ದೇವನಹಳ್ಳಿ ಯೂನಿಟ್, ಮಿನಿ ಟೌನ್ ಶಿಪ್ ನಂತೆ ಇದೆ. ದೀರ್ಘಾವಧಿಯಲ್ಲಿ ವಸತಿ ಸೌಲಭ್ಯ, ಹೆಲ್ತ್ ಕೇರ್ ಸೌಲಭ್ಯ, ಸ್ಕೂಲ್, ಮನರಂಜನಾ ವ್ಯವಸ್ಥೆಯನ್ನು ಇಲ್ಲೇ ನಿರ್ಮಾಣ ಮಾಡಲಾಗುತ್ತೆ. ಉದ್ಯೋಗಿಗಳಿಗೆ ಉಚಿತ ವಸತಿ ಮತ್ತು ಸಬ್ಸಿಡಿ ದರದಲ್ಲಿ ಊಟದ ವ್ಯವಸ್ಥೆ ನೀಡಲಾಗುತ್ತೆ.

