ಹೊಸದಿಗಂತ ವರದಿ, ಚಿತ್ರದುರ್ಗ:
ಮನಿ ಡಬ್ಲಿಂಗ್ ಆರೋಪದ ಮೇಲೆ ಚಿತ್ರದುರ್ಗ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಜಯಲಕ್ಷ್ಮಿ ಬಡಾವಣೆ ನಿವಾಸಿ ಶಂಕರಗೌಡ ಪಾಟೀಲ್ ಬಂಧಿತ ಆರೋಪಿ. ಈತ ಮಹರಾಷ್ಟ್ರದ ಮೂರು ಜನರಿಂದ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ೧೭,೬೬,೦೦೦ ರೂ.ಗಳನ್ನು ಪಡೆದಿದ್ದ. ಒಂದು ಪಟ್ಟು ಹಣಕ್ಕೆ ಮೂರು ಪಟ್ಟು ಹಣ ನೀಡುವುದಾಗಿ ಶಂಕರಗೌಡ ಪಾಟೀಲ್ ಹಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹರಾಷ್ಟ್ರದ ಮಹೇಶ್ ಕಾಟ್ಕರ್, ಸಚಿನ್ಬಾಳು ಕಾಂಬ್ಳೆ ಹಾಗೂ ಅನಗ ಸುನಿಲ್ ಎಂಬುವರು ಶಂಖರಗೌಡ ಪಾಟೀಲ್ಗೆ ಹಣ ನೀಡಿದ್ದರು ಎನ್ನಲಾಗಿದೆ. ಇವರಿಂದ ಹಣ ಪಡೆದ ನಂತರ ಡಬ್ಲಿಂಗ್ ಹಣ ನೀಡದೆ ಮೋಸ ಮಾಡಿದ ಆರೋಪದ ಮೇಲೆ ಶಂಕರಗೌಡ ಪಾಟೀಲ್ನನ್ನು ಬಂಧಿಸಲಾಗಿದೆ. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.