ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿಯಾಗಿರುವುದು ನಿಜ. ಅದರಂತೆ ಜೂ. 23ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಮಧ್ಯಾಹ್ನವಷ್ಟೇ ಇಡಿ ಸಮನ್ಸ್ ಜಾರಿ ಮಾಡಿದೆ. ಅಧಿಕಾರಿಗಳು ಮನೆಗೆ ಬಂದು ಸಮನ್ಸ್ ನೀಡಿದಾಗ, ನಾನು ಮನೆಯಲ್ಲಿ ಇರಲಿಲ್ಲ. ಅನಂತರ ಮನೆಗೆ ಬಂದು ಭೇಟಿಯಾಗಿ, ಯಾವ ವಿಚಾರವಾಗಿ ಸಮನ್ಸ್ ಎಂದು ನೋಡಿದಾಗ ಐಶ್ವರ್ಯಗೌಡ ಕೇಸ್ ಎಂಬುದು ಗೊತ್ತಾಯಿತು ಎಂದು ಹೇಳಿದರು.
ಜೂನ್ 19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ, ಅಂದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಬರುವ ಸೋಮವಾರ (ಜೂನ್ 23) ಹಾಜರಾಗುವುದಾಗಿ ಹೇಳಿದ್ದೇನೆ. ಈಗ ಮೌಖಿಕವಾಗಿ ತಿಳಿಸಿದ್ದೇನೆ. ನಂತರ ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಯಾವುದೇ ಅಕೌಂಟ್ ಟ್ರಾನ್ಸಾಕ್ಷನ್ ನಡೆಸಿರಲಿಲ್ಲ. ಅವರು ನಮ್ಮ ಕ್ಷೇತ್ರದವರು. ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಎನ್ನುವ ಹೆಸರಲ್ಲಿ ಹೀಗೆಲ್ಲ ಮಾಡಿದ್ದಾರೆಂಬುದು ತಿಳಿದ ಕೂಡಲೇ ಸ್ವತಃ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7 ರಿಂದ 8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಅದನ್ನ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.