ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಿಎಸಿಎಲ್ ನಕಲಿ ಕಂಪನಿಯ ವಂಚನೆಗೆ ಸಂಬಂಧಿಸಿ ರಾಜಸ್ಥಾನ ಕಾಂಗ್ರೆಸ್‌ನ ಮಾಜಿ ನಾಯಕ ಪ್ರತಾಪ್ ಸಿಂಗ್ ಖಾಚರಿಯಾವಾಸ್ ಮತ್ತು ಪಂಜಾಬ್ ಎಎಪಿ ಶಾಸಕ ಕುಲ್ವಂತ್ ಸಿಂಗ್‌ಗೆ ಸೇರಿದ ಮನೆ, ಕಚೇರಿಗಳ ಮೇಲೆ ಇಂದು ಇ.ಡಿ. ದಾಳಿ ಮಾಡಿದೆ.
2015ರಲ್ಲಿ ನಿರ್ಮಲ್ ಸಿಂಗ್ ಭಾಂಗೋ ಮತ್ತಿತರರ ಒಡೆತನದ ಪಿಎಸಿಎಲ್ ಇಂಡಿಯಾ ಲಿಮಿಟೆಡ್ ವಿರುದ್ಧ ಸಿಬಿಐ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು. ಪಿಎಸಿಎಲ್ ಮತ್ತು ಅದರ ನಿರ್ದೇಶಕರು ಹೂಡಿಕೆದಾರರಿಂದ ₹48,000 ಕೋಟಿ ಸಂಗ್ರಹಿಸಿ ಹಣವನ್ನು ಖಾಚರಿಯಾವಾಸ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅಕ್ರಮ ಹೂಡಿಕೆ ಮಾಡಿದ್ದಾರೆ ಎಂದು ಇ.ಡಿ. ಹೇಳಿದೆ. ಕಳೆದ ವರ್ಷ ಭಾಂಗೋ ನಿಧನರಾಗಿದ್ದರು. ಅವರಿಗೆ ಸೇರಿದ 706 ಕೋಟಿ ಮೌಲ್ಯದ ಸಂಪತ್ತು ಈಗ ಇ.ಡಿ ವಶದಲ್ಲಿದೆ.
ಎಎಪಿ ಶಾಸಕ ಕುಲ್ವಂತ್ ಸಿಂಗ್ ಜನತಾ ಲ್ಯಾಂಡ್ ಪ್ರಮೋಟರ್ಸ್ ಲಿಮಿಟೆಡ್(ಜೆಎಲ್‌ಪಿಎಲ್) ಸಂಸ್ಥಾಪಕರಾಗಿದ್ದು, ₹1000 ಕೋಟಿ ಸಂಪತ್ತಿನೊಂದಿಗೆ ಪಂಜಾಬ್‌ನ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ.
ಇ.ಡಿ. ದಾಳಿಯು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ಈ ಕುತಂತ್ರ ಎಂದು ರಾಜಸ್ಥಾನ ಕಾಂಗ್ರೆಸ್ ಆರೋಪ ಮಾಡಿದೆ.