March 22, 2026
Sunday, March 22, 2026
spot_img

ಪತ್ರಿಕೋದ್ಯಮದ ಹೆಸರಲ್ಲಿ ವಂಚನೆ: ಮಹಿಳಾ ಅಧಿಕಾರಿಯ ಖಾಸಗಿತನಕ್ಕೆ ಕನ್ನ ಹಾಕಿದ್ದ ಗ್ಯಾಂಗ್ ಅರೆಸ್ಟ್

ಹೊಸದಿಗಂತ ಬೆಳಗಾವಿ:

ಸರಕಾರಿ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ತಂಡಕ್ಕೆ ಈಗ ಕಾನೂನಿನ ಸಂಕೋಲೆ ಬಿದ್ದಿದೆ.

ಈ ಗಂಭೀರ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು, ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿಗಳಾದ ಸಮೀದ್ ವಿಸಾರ್ ಅಹ್ಮದ್ ಶೇಖ್, ಅಬ್ದುಲ್ ರಶೀದ್ ಮಕಾನದಾರ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಎಂಬುವವರು ಪತ್ರಕರ್ತರ ಸೋಗಿನಲ್ಲಿ ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದರು. ಅಧಿಕಾರಿಗಳ ಖಾಸಗಿ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಈ ಜಾಲದ ಹಿಂದೆ ಇದ್ದ ವಿನೋದ ಎಂಬಾತನನ್ನು ಕಳೆದ ವಾರವಷ್ಟೇ ಬಂಧಿಸಲಾಗಿತ್ತು.

ವಿನೋದ ನೀಡಿದ ಸ್ಫೋಟಕ ಮಾಹಿತಿಯ ಆಧಾರದ ಮೇಲೆ, ಈ ಹಿಂದೆ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪುನಃ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಮಹತ್ವದ ಡೇಟಾ ಲಭ್ಯವಾಗಿದ್ದು, ಇವರು ಇನ್ನೂ ಎಷ್ಟು ಅಧಿಕಾರಿಗಳಿಗೆ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ಸತ್ಯಾಂಶ ಹೊರಬರಬೇಕಿದೆ.

ಶುಕ್ರವಾರ ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ನಕಲಿ ಪತ್ರಕರ್ತರ ಹೆಸರಿನಲ್ಲಿ ನಡೆಯುತ್ತಿದ್ದ ಈ ದೊಡ್ಡ ಮಟ್ಟದ ಹಗರಣವನ್ನು ಭೇದಿಸಿರುವ ಮಾಳಮಾರುತಿ ಪೊಲೀಸರು, ಇದರ ಹಿಂದಿರುವ ಸಂಪೂರ್ಣ ಜಾಲವನ್ನು ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !