ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂದೆ ಚಾಲನೆ ನೀಡಲಿದ್ದಾರೆ.
ಮಹಿಳೆಯರಿಗೆ ನೀಡುವ ಶೂನ್ಯ ದರದ ಪಿಂಕ್ ಟಿಕೆಟ್ ಅನ್ನು ಮಹಿಳಾ ಪ್ರಯಾಣಿಕರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನೀಡುವ ಮೂಲಕ ಚಾಲನೆ ನೀಡಲಿದ್ದಾರೆ.
ಬಳಿಕ ಹತ್ತರಿಂದ ಹದಿನೈದು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ.
ಸಂಚಾರ ಮಾರ್ಗದಲ್ಲಿ ಬದಲಾವಣೆ
ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂಬೇಡ್ಕರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಕೆ.ಆರ್.ಸರ್ಕಲ್ ಕಡೆಯಿಂದ ಬಾಳೆಕುಂದ್ರಿ ಸರ್ಕಲ್ ಕಡೆಗೆ ತೆರಳುವ ವಾಹನ ನೃಪತುಂಗ ರಸ್ತೆ ಮಾರ್ಗವಾಗಿ ಸಂಚರಿಸಬಹುದು. ಬಾಳೇಕುಂದ್ರಿ ಸರ್ಕಲ್ನಿಂದ ಕೆ.ಆರ್.ಸರ್ಕಲ್ ರಸ್ತೆ ಕಡೆಗೆ ಹೋಗುವ ಸವಾರರು ಕ್ವೀನ್ಸ್ ರಸ್ತೆ ಸಿದ್ದಲಿಂಗಯ್ಯ ರಸ್ತೆ ಮೂಲಕ ಸಂಚರಿಸಬಹುದು. ಸಿಟಿಓ ವೃತ್ತದಿಂದ ಬರುವ ಸವಾರರಿಗೆ ಪೊಲೀಸ್ ತಿಮ್ಮಯ್ಯ ಸರ್ಕಲ್ನಲ್ಲಿ ಎಡ ತಿರುವು ನಿಷೇಧ ಇದ್ದು, ರಾಜಭವನ ರಸ್ತೆ ಮೂಲಕ ಸಂಚರಿಸಲು ಅವಕಾಶ ಇದೆ.
ಶಕ್ತಿ ಯೋಜನೆ
ಇಂದು ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರು ರಾಜ್ಯದಾದ್ಯಂತ 4 ಸಾರಿಗೆ ನಿಗಮಗಳ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್ ಗಳಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಪ್ರತಿಷ್ಠಿತ ಬಸ್ ಸೇರಿದಂತೆ ಹೊರ ರಾಜ್ಯಗಳಿಗೆ ಸಂಚಾರ ಮಾಡುವ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವದಿಲ್ಲ.
ಉಚಿತ ಪ್ರಯಾಣಕ್ಕೆ ಗುರುತಿನ ಚೀಟಿ ಕಡ್ಡಾಯ
ಸಾರಿಗೆ ಸಂಸ್ಥೆಗಳು ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಆಧಾರ್ ಕಾರ್ಡ, ವೋಟರ್ ಐಡಿ, ಡ್ರೈವಿಂಗ್ ಲೈಸನ್ಸ್, ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ನೀಡಿರುವ ಗುರುತಿನ ಚೀಟಿ ಇವುಗಳಲ್ಲಿ ಒಂದು ದಾಖಲೆ ತೋರಿಸಿ ಶೂನ್ಯ ಮೊತ್ತದ ಟಿಕೆಟ್ ಪಡೆದು ಉಚಿತ ಪ್ರಯಾಣ ಮಾಡಬಹುದು.