ಹೊಸದಿಗಂತ ವರದಿ,ಮಂಡ್ಯ :
ಮಂಡ್ಯ ಜಿಲ್ಲೆಯಲ್ಲಿ ಕರೆಂಟ್ ಬಿಲ್ ಕಟ್ಟದ ಕಳ್ಳರು ಇದ್ದಾರೆ. ಅವರ್ಯಾರೂ ಈಗ ಬಿಲ್ ಕಟ್ಟುವಂತಿಲ್ಲ. ಆ ರೀತಿಯ ಗ್ಯಾರಂಟಿ ಯೋಜನೆಯನ್ನು ತಂದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಂಟ್ ಕಟ್ಟದ ಕಳ್ಳರಿಗೂ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರು ಕರೆಂಟ್ ನೀಡಲಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.
ಕಮಲ ಕೆರೆಯಲ್ಲಿದ್ದರೆ ಚನ್ನ, ತೆನೆ ಹೊಲದಲ್ಲಿದ್ದರೆ ಚನ್ನ, ದಾನ ಧರ್ಮ ಮಾಡುವ ಕೈ ಅಧಿಕಾರಿದಲ್ಲಿದ್ದರೆ ಚನ್ನ. ಈಗ ಐದು ಗ್ಯಾರಂಟಿಯನ್ನು ನೋಡಿ ಅರಳಿದ ಕಮಲ ಮುದುಡಿತು. ಕುಮಾರಣ್ಣನ ಹೊರೆ ಹೊತ್ತ ಮಹಿಳೆಯನ್ನು ಕಿತ್ತು ಬಿಸಾಕಿ ಕಮಲವನ್ನು ಮುಡಿದರು. ನಮ್ಮ ಸರ್ಕಾರ ಗ್ಯಾರಂಟಿಯಿಂದ ಭದ್ರಗೊಂಡಿದೆ. ಶಕ್ತಿಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯನ್ನು ಕೊಟ್ಟಿದ್ದೇವೆ ಎಂದ ಅವರು, ದೇವರು ಶಾಪನೂ ಕೊಡಲ್ಲ, ವರನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ನೀವು ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿ ಮಾಡಲು ಹೊರಟಿದ್ದೇವೆ ಎಂದು ಹೇಳಿದರು.
ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ನರೇಂದ್ರಸ್ವಾಮಿ ಅವರು ಬುದ್ಧನ ಪ್ರತಿಮೆಯನ್ನು ಕೊಟ್ಟರು. ಅದನ್ನು ಬೇಡ ಎಂದು ತಿರಸ್ಕರಿಸಿದೆ. ಅರ್ಜುನನ ಗುರಿ, ಕರ್ಣನ ದಾನ, ವಿಧುರನ ನೀತಿ, ಕೃಷ್ಣನ ತಂತ್ರವನ್ನು ಅನುಸರಿಸಿ ಚುನಾವಣೆಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಇನ್ನು ಬುದ್ಧನನ್ನು ಇಟ್ಟುಕೊಂಡು ಏನು ಮಾಡಲಿ ಎಂದು ಬೇಡ ಎಂದೆ ಎಂದು ಸಮಜಾಯಿಸಿ ನೀಡಿದರು.
ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ತಬ್ಬಾಡುತ್ತಿದ್ದೀರಲ್ಲ ನಿಮ್ಮ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಜಾರಿಗೆ ದಾರಿ ಮಾಡಿಕೊಡಲಿಲ್ಲ. ದೇವೇಗೌಡರು ಅಯ್ಯೋ ಎಂದು ಕಣ್ಣೀರುಡುತ್ತಿದ್ದೀರಲ್ಲಾ, ಇದು ಸರಿಯಾ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ನದಿಗಳು, ಕಾರ್ಖಾನೆಗಳು, ನಾಲೆಗಳನ್ನು ಹೊಸ ಮಾದರಿಯಲ್ಲಿ ಮಾಡುವ ಮೂಲಕ ಬದಲಾವಣೆ ತರುತ್ತೇವೆ. ಅಂಬರೀಶ್ ಅವರ ಹೆಸರಿನಲ್ಲಿ ಒಂದು ರಸ್ತೆಯನ್ನು ಮಾಡುತ್ತೇವೆ. ನಮ್ಮ ಅಭ್ಯರ್ಥಿ ವೆಂಕಟರಮಣೇಗೌಡ ಅವರು ಸೂರ‌್ಯಚಂದ್ರರಿವರಷ್ಟೇ ಸತ್ಯವಾಗಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.