Thursday, November 13, 2025

ಸರ್ಕಾರಿ ಬಸ್​ಗಳಲ್ಲಿ ಕ್ಯಾನ್ಸರ್​ ರೋಗಿಗಳಿಗೆ ಉಚಿತ ಪ್ರಯಾಣ: ಕೇರಳ ಸರಕಾರ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕ್ಯಾನ್ಸರ್​ ರೋಗಿಗಳು ರಾಜ್ಯದ ಯಾವುದೇ ಸರ್ಕಾರಿ ಬಸ್​​ಗಳಲ್ಲಿ ಉಚಿತವಾಗಿ ಸಂಚಾರ ನಡೆಸಲು ಕೇರಳ ಸರ್ಕಾರ ಅವಕಾಶ ಕಲ್ಪಿಸಿದೆ.

ರಾಜ್ಯ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಇಂದು ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ಘೋಷಣೆ ಮಾಡಿದರು. ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಸೂಪರ್ ಫಾಸ್ಟ್ ಮತ್ತು ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ ಎಂದರು.

ಕಿಮೊಥೆರಪಿ, ರೇಡಿಯೇಷನ್​ ಮತ್ತು ಇತರ ಚಿಕಿತ್ಸೆಗಳಿಗೆ ಆಗಾಗ್ಗೆ ಪ್ರಯಾಣಿಸಬೇಕಾದ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಚಿಕಿತ್ಸೆಗಾಗಿ ರಾಜ್ಯದ ಯಾವುದೇ ಭಾಗಕ್ಕೂ ಪ್ರಯಾಣಿಸುವ ಕ್ಯಾನ್ಸರ್ ರೋಗಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ನೀಡಲಾಗುವುದು. ಈ ಕುರಿತು ಆದೇಶ ಇಂದು (ಅಕ್ಟೋಬರ್​ 9) ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜೊತೆಗೆ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು. ಉಚಿತ ಪ್ರಯಾಣ ಸೌಲಭ್ಯವನ್ನು ಪಡೆಯಲು ರೋಗಿಗಳು ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಮಾಣಪತ್ರ ತೋರಿಸಿದರೆ ಸಾಕು ಎಂದು ಅವರು ಹೇಳಿದರು.

ರಾಜ್ಯದ ರೋಗಿಗಳು ಇದರ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!