ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಸಾರಿಗೆ ಸಂಪರ್ಕದ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಪದೇ ಪದೇ ತಾಂತ್ರಿಕ ದೋಷಗಳನ್ನು ಎದುರಿಸುತ್ತಿರುವುದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನೂತನ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡಗೆ ಪತ್ರ ಬರೆದಿರುವ ಅವರು, ಮೆಟ್ರೋ ಕಾರ್ಯಾಚರಣೆಯ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
2024ರಿಂದ ಬರೋಬ್ಬರಿ 20 ಬಾರಿ ಅಡಚಣೆ!
ಜೂನ್ 2026 ರ ಪ್ರಸ್ತುತ ಅವಧಿಯವರೆಗಿನ ಅಂಕಿ-ಅಂಶಗಳನ್ನು ಉಲ್ಲೇಖಿಸಿ ಪತ್ರ ಬರೆದಿರುವ ತೇಜಸ್ವಿ ಸೂರ್ಯ, 2024 ರ ಜನವರಿಯಿಂದೀಚೆಗೆ ಬೆಂಗಳೂರು ಮೆಟ್ರೋ ನೆಟ್‌ವರ್ಕ್‌ನಲ್ಲಿ ಸುಮಾರು 20 ಕ್ಕೂ ಹೆಚ್ಚು ಬಾರಿ ತಾಂತ್ರಿಕ ದೋಷಗಳು ಮತ್ತು ಸೇವೆಗಳಲ್ಲಿ ಅಡಚಣೆಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ. ಇವುಗಳಲ್ಲಿ ಬಹುಪಾಲು ಸ್ಥಗಿತಗಳು ಅತಿ ಹೆಚ್ಚು ಜನದಟ್ಟಣೆ ಇರುವ ನೇರಳೆ ಮಾರ್ಗದಲ್ಲಿಸಂಭವಿಸಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಪಾರ್ಕ್ ಘಟನೆಯ ಉಲ್ಲೇಖ
ಇತ್ತೀಚೆಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಪರದಾಡುವಂತಾಗಿತ್ತು. ಈ ಘಟನೆಯನ್ನು ಪ್ರಸ್ತಾಪಿಸಿರುವ ಸಂಸದರು, “ಇದು ಕೇವಲ ಸಾಂದರ್ಭಿಕ ದೋಷಗಳಲ್ಲ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಬಿಎಂಆರ್‌ಸಿಎಲ್ಕಾರ್ಯಾಚರಣೆಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಮೂಡಿಸುತ್ತಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:
ರೈಲ್ವೆ ಸುರಕ್ಷತಾ ಆಯುಕ್ತರಿಗೂ ಪತ್ರ: ಸುರಕ್ಷತಾ ಆಡಿಟ್‌ಗೆ ಆಗ್ರಹ
ಸಚಿವರ ಗಮನ ಸೆಳೆಯುವುದರ ಜತೆಗೆ, ತೇಜಸ್ವಿ ಸೂರ್ಯ ಅವರು ರೈಲ್ವೆ ಸುರಕ್ಷತಾ ಆಯುಕ್ತರಿಗೂ ಪ್ರತ್ಯೇಕ ಪತ್ರ ಬರೆದಿದ್ದು, ನಮ್ಮ ಮೆಟ್ರೋದ ಸುರಕ್ಷತಾ ಮಾನದಂಡಗಳ ಬಗ್ಗೆ ಸಮಗ್ರ ತನಿಖೆ ಮತ್ತು ಆಡಿಟ್ ನಡೆಸುವಂತೆ ಒತ್ತಾಯಿಸಿದ್ದಾರೆ. ಪ್ರತಿ ತಾಂತ್ರಿಕ ವೈಫಲ್ಯದ ಮೂಲ ಕಾರಣ ಮತ್ತು ಅದಕ್ಕೆ ಕೈಗೊಂಡಿರುವ ಸರಿಪಡಿಸುವ ಕ್ರಮಗಳನ್ನು ಬಿಎಂಆರ್‌ಸಿಎಲ್ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



