ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಇಂದು ನಾಲ್ವರು ಪ್ರಮುಖರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದಾರೆ. ಮುಂಬೈ ಬ್ಲಾಸ್ಟ್, ಮುಂಬೈ ಉಗ್ರ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಉಗ್ರರಿಗೆ ಗಲ್ಲು ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ವಕೀಲ ಉಜ್ವಲ್ ನಿಖಂ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗಾಲ, ಇತಿಹಾಸ ತಜ್ಞೆ ಮೀನಾಕ್ಷಿ ಹಾಗೂ ಶಾಲಾ ಶಿಕ್ಷಕ, ಬಿಜೆಪಿ ಸದಸ್ಯ ಸದಾನಂದ ಮೇಷ್ಟ್ರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಈ ಪೈಕಿ ಸದಾನಂದ ಮೇಷ್ಟ್ರು ಅವರ ಬದುಕು ಸ್ಪೂರ್ತಿಯಾಗಿದೆ. ಸದಾನಂದ ಮೇಷ್ಟ್ರ ಕಣ್ಣೀರ ಬದುಕು ದಾಳಿ ಕರಾಳ ಮುಖ ತೆರೆದಿಡುತ್ತಿದೆ.
ಸದಾನಂದ ಮೇಷ್ಟ್ರು ಕೇರಳ ಮೂಲದವರು. ತ್ರಿಶೂರ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸದಾನಂದ ಮೇಷ್ಟ್ರು 1994ರಲ್ಲಿ ನಡೆದ ಕಣ್ಣೂರು ದಾಳಿ ಹಾಗೂ ಗಲಭೆಯಲ್ಲಿ ತಮ್ಮ ಎರಡು ಕಾಲು ಕಳೆದುಕೊಂಡರು. ಇದು ಕೇವಲ ದಾಳಿಯಲ್ಲಿ ಅಚಾನಕ್ಕಾಗಿ ಕಾಲು ಕಳೆದುಕೊಂಡಿದ್ದಲ್ಲ. ಆರ್‌ಎಸ್ಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದ ಮೇಷ್ಟ್ರು ಮೇಲೆ ಕೇರಳ ಸಿಪಿಎಂ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಕಾಲು ಕಳೆದುಕೊಂಡಿದ್ದಾರೆ.
ಸದಾನಂದ ಮೇಷ್ಟ್ರು ಆರ್‌ಎಸ್‌ಎಸ್ ಸದಸ್ಯನಾಗಿದ್ದ ಕಾರಣ ಸೈದ್ದಾಂತಿಕವಾಗಿ ಹಲವರ ವಿರೋಧ ಕಟ್ಟಿಕೊಳ್ಳಬೇಕಾಯಿತು. ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಸದಾನಂದ ಮೇಷ್ಟ್ರ ಮೇಲೂ ದಾಳಿ ನಡೆದಿತ್ತು. ಸದಾನಂದ ಮೇಷ್ಟ್ರ ಎರಡೂ ಕಾಲನ್ನು ಕತ್ತರಿಸಿ ಎಸೆಯಲಾಗಿತ್ತು. ಅತ್ಯಂತ ಕ್ರೂರ ದಾಳಿಯಲ್ಲಿ ಸದಾನಂದ ಮೇಷ್ಟ್ರು ಜೀವ ಉಳಿದಿದ್ದೆ ಪವಾಡ.
ಮೇಷ್ಟ್ರಿಗೆ ರಾಜ್ಯಸಭೆ ಗೌರವ
ಆಸ್ಪತ್ರೆಯಲ್ಲಿ ಸುದೀರ್ಘ ವರ್ಷಗಳ ಕಾಲ ಚಿಕಿತ್ಸೆ ಪಡೆದ ಸದಾನಂದ ಮೇಷ್ಟ್ರು ಚೇತರಿಸಿಕೊಂಡರು. ಆದರೆ ಎರಡೂ ಕಾಲು ಇರಲಿಲ್ಲ. ಹೀಗಾಗಿ ಶಿಕ್ಷಕ ವೃತ್ತಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಿಜೆಪಿಯ ಕಾರ್ಯಕರ್ತನಾಗಿ, ಆರ್‌ಎಸ್ಎಸ್ ಸದಸ್ಯನಾಗಿ ಕೆಲಸ ಮುಂದುವರಿಸಿದ್ದರು. ಹಂತ ಹಂತವಾಗಿ ಕೇರಳದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ, ತಳಮಟ್ಟದಲ್ಲಿ ಬೇರೂರುವಂತೆ ಮಾಡಲು ಸದಾನಂದ ಮೇಷ್ಟ್ರು ನಿರಂತರ ಶ್ರಮವಹಿಸಿದ್ದಾರೆ. ಇದೀಗ ಕೇರಳ ಬಿಜೆಪಿಯ ಉಪಾಧ್ಯಕ್ಷ ಜವಾಬ್ದಾರಿ ನಿರ್ವಹಿಸುತ್ತಿರುವ ಮೇಷ್ಟ್ರಿಗೆ ಬಿಜಿಪಿ ರಾಜ್ಯಸಭೆ ಸ್ಥಾನ ನೀಡಿದೆ.
ಅಧಿಕೃತ ಘೋಷಣೆಗೂ ಮೊದಲು ಕರೆ ಮಾಡಿದ್ದ ಪ್ರಧಾನಿ ಮೋದಿ
ಸದಾನಂದ ಮೇಷ್ಟ್ರು ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಅಧಿಕೃತ ಘೋಷಣೆ ಮೊದಲೇ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಸದಾನಂದ ಮೇಷ್ಟ್ರಿಗೆ ಕರೆ ಮಾಡಿ ಮಾತನಾಡಿದ್ದರು. ಕೇರಳ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು. ಕೇರಳದಲ್ಲಿ ರಾಜಕೀಯ ದ್ವೇಷ, ಹಿಂಸಾಚಾರಗಳು ನಿಲ್ಲಬೇಕು. ಕೇರಳ ಭಾರತದ ಭೂಪಟದಲ್ಲಿ ಮತ್ತೆ ನಳನಳಿಸುವಂತೆ ಮಾಡಲು ನಿಮ್ಮ ಸಹಕಾರ, ಕೊಡುಗೆ ಅಗತ್ಯ ಎಂದು ಪ್ರಧಾನಿ ಮೋದಿ ಕರೆ ಮಾಡಿ ಹೇಳಿದ್ದರು ಎಂದು ಸದಾನಂದ ಮೇಷ್ಟ್ರು ಹೇಳಿದ್ದಾರೆ.