ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕ್ಲಾಸ್ (Spoken English Classes) ಶುರು ಮಾಡಲು ತಯಾರಿ ನಡೆದಿದೆ. ‘How to Make English Easy’ ಎಂಬ ಪರಿಕಲ್ಪನೆಯೊಂದಿಗೆ ಈ ಯೋಜನೆಯನ್ನು ರೂಪಿಸುವಂತೆ ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‌ಇಎಲ್) 2024-25ರ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪರಿಚಯಿಸಲಿದೆ. 40 ನಿಮಿಷಗಳ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪ್ರತಿ ಶನಿವಾರ ನಡೆಸಲು ಸಿದ್ಧತೆ ನಡೆದಿದೆ.
ಈ ಹಿಂದೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಿರುವುದು ಸಾಕಷ್ಟು ಸದ್ದು ಮಾಡಿತ್ತು.
2024-25ರ ಶೈಕ್ಷಣಿಕ ವರ್ಷದಿಂದ ಸ್ಪೋಕನ್ ಕ್ಲಾಸ್ ಶುರುವಾಗಲಿದೆ. ಸರ್ಕಾರಿ ಶಾಲೆಗಳಲ್ಲಿರುವ ಇಂಗ್ಲಿಷ್ ಶಿಕ್ಷಕರಿಂದ ಸ್ಪೋಕನ್ ಇಂಗ್ಲಿಷ್ ಪಾಠ ಮಾಡಲಾಗುತ್ತದೆ. ಈ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ ಶುರು ಮಾಡಲಾಗುತ್ತದೆ. ಈ ಮೂಲಕ ಸರಕಾರಿ ಶಾಲೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಆಗಿರುವ ಇಂಗ್ಲಿಷ್ ಭಾಷೆಯನ್ನು ಕರಗತಗೊಳಿಸಲು ಇದು ಸಹಕಾರಿ ಆಗಲಿದೆ.
ಪ್ರತಿ ಶನಿವಾರದ 3ನೇ ತರಗತಿಯನ್ನು ಸ್ಪೋಕನ್ ಇಂಗ್ಲಿಷ್‌ಗೆ ಮೀಸಲಿಡಲಾಗುತ್ತದೆ. ಸುಮಾರು 40 ನಿಮಿಷದ ಅವಧಿಯಲ್ಲಿ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡಬೇಕು. ಈ ಮೂಲಕ ವಿದ್ಯಾರ್ಥಿಗಳು, ಸಹಜವಾಗಿ ಇಂಗ್ಲಿಷ್ ಕಲಿಯಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕೆಂಬ ಸೂಚನೆ ನೀಡಲಾಗಿದೆ.