Thursday, January 1, 2026

ಇನ್ಮುಂದೆ ಬೆಂಗಳೂರು to ಮಂಗಳೂರು ಬರೀ 5 ಗಂಟೆ ಮಾತ್ರ! ಶೀಘ್ರದಲ್ಲೇ ಶುರುವಾಗ್ತಿದೆ ವಂದೇ ಭಾರತ್ ಟ್ರೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುಕಾಲದ ನಿರೀಕ್ಷೆ ಕೊನೆಯಾಗಲಿದೆ. ಬೆಂಗಳೂರು–ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಶೀಘ್ರ ಆರಂಭವಾಗುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ಕರಾವಳಿ ಪ್ರದೇಶದ ಪ್ರಯಾಣಿಕರಿಗೆ ವೇಗವಾದ ಹಾಗೂ ಆರಾಮದಾಯಕ ಸಂಚಾರ ಲಭ್ಯವಾಗಲಿದೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ ಸುಮಾರು 55 ಕಿಲೋಮೀಟರ್ ಉದ್ದದ ಸವಾಲಿನ ಘಾಟ್ ವಿಭಾಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮಾರ್ಗದ ವಿದ್ಯುದ್ದೀಕರಣ ಕಾರ್ಯ ಈಗಾಗಲೇ ಅಂತಿಮ ಹಂತ ತಲುಪಿದ್ದು, ಶೀಘ್ರವೇ ಸೇವೆ ಆರಂಭವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ವಂದೇ ಭಾರತ್ ಅರೆ–ಹೈ–ಸ್ಪೀಡ್ ರೈಲು ಸಂಪೂರ್ಣವಾಗಿ ವಿದ್ಯುತ್ ಎಳೆತದ ಮೇಲೆ ಕಾರ್ಯನಿರ್ವಹಿಸಲಿದೆ. ಇದರಿಂದ ಸಂಚಾರವು ಹೆಚ್ಚು ವೇಗವಾಗಿದ್ದು, ಪರಿಸರ ಸ್ನೇಹಿಯಾಗಿಯೂ ಇಂಧನ ದಕ್ಷತೆಯನ್ನೂ ಹೊಂದಿರಲಿದೆ.

ಸಾಮಾನ್ಯ ರೈಲುಗಳಲ್ಲಿ ಬೆಂಗಳೂರು–ಮಂಗಳೂರು ಪ್ರಯಾಣಕ್ಕೆ 9ರಿಂದ 10 ಗಂಟೆಗಳ ಕಾಲ ಬೇಕಾಗುತ್ತಿದ್ದು, ವಂದೇ ಭಾರತ್ ರೈಲು ಈ ಅವಧಿಯನ್ನು ಸುಮಾರು 5 ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಇದರಿಂದ ವ್ಯಾಪಾರ ಪ್ರಯಾಣಿಕರು, ಪ್ರವಾಸಿಗರು ಮತ್ತು ರಜೆಗಾಗಿ ಸಂಚರಿಸುವವರಿಗೆ ದೊಡ್ಡ ಅನುಕೂಲ ಸಿಗಲಿದೆ.

error: Content is protected !!