ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ಜುಲೈ 1ರಿಂದ ವಾಹನಗಳ ತಪಾಸಣೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗುತ್ತಿದೆ. ಈ ನಿಯಮದ ಪ್ರಕಾರ, End of Life (EOL) ಅಂದರೆ ನಿಯತ ಅವಧಿ ಮೀರಿ ಬಳಕೆಯಲ್ಲಿರುವ ಹಳೆಯ ವಾಹನಗಳಿಗೆ ಯಾವ ಪೆಟ್ರೋಲ್ ಬಂಕ್‌ಗಳಲ್ಲೂ ಇಂಧನ ಲಭ್ಯವಾಗುವುದಿಲ್ಲ. ಜೊತೆಗೆ ನಿಯಮ ಉಲ್ಲಂಘಿಸಿದರೆ ದಂಡ ಅಥವಾ ವಾಹನ ಸೀಝ್ ಆಗುವ ಭೀತಿ ಎದುರಾಗಲಿದೆ.
EOL ವಾಹನಗಳು ಎಂದರೆ ಪೆಟ್ರೋಲ್ ವಾಹನಗಳು 15 ವರ್ಷ ಹಾಗೂ ಡೀಸೆಲ್ ವಾಹನಗಳು 10 ವರ್ಷಗಳನ್ನು ಮೀರಿದ್ದರೆ ಅವುಗಳನ್ನು ಹಳೆಯ ಅಥವಾ ಅವಧಿ ಮುಗಿದ ವಾಹನ ಎಂದು ಪರಿಗಣಿಸಲಾಗುತ್ತದೆ. ಇಂತಹ ವಾಹನಗಳಿಗೆ ಪಿಯುಸಿ ಹಾಗೂ ಫಿಟ್ನೆಸ್ ಪ್ರಮಾಣಪತ್ರ ದೊರಕಿಸಿಕೊಳ್ಳುವುದು ಕಷ್ಟದ ಸಂಗತಿ ಆಗಿದ್ದು, ಇದರಿಂದಾಗಿ ನಿಯಮ ಉಲ್ಲಂಘನೆಯ ಸಾಧ್ಯತೆ ಹೆಚ್ಚಾಗಿದೆ.
ಈ ಹೊಸ ನಿಯಮಗಳ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚುತ್ತಿರುವ ಸ್ಥಿತಿಗೆ ತಡೆ ನೀಡಲು ಕಠಿಣ ಕ್ರಮ ಕೈಗೊಂಡಿದ್ದು, 500 ಪೆಟ್ರೋಲ್ ಬಂಕ್‌ಗಳಲ್ಲಿ Automated Number Plate Recognition (ANPR) ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಕ್ಯಾಮೆರಾಗಳು ವಾಹನದ ದಾಖಲಾತಿ ಮೂಲಕ ಅದರ ಮಾನ್ಯತೆ, ಅವಧಿ ಮುಗಿದಿದೆಯೆ ಎಂಬ ಮಾಹಿತಿಯನ್ನು ತಕ್ಷಣ ಪತ್ತೆಹಚ್ಚಲಿವೆ.
ನಿಯಮ ಉಲ್ಲಂಘಿಸಿದರೆ ದ್ವಿಚಕ್ರ ವಾಹನಕ್ಕೆ 5,000 ಹಾಗೂ ನಾಲ್ಕು ಚಕ್ರದ ವಾಹನಕ್ಕೆ 10,000 ದಂಡ ವಿಧಿಸಲಾಗುತ್ತದೆ. ಜೊತೆಗೆ ಟ್ರಾಫಿಕ್ ಪೊಲೀಸ್ ಇಲಾಖೆ ಇಂತಹ ವಾಹನಗಳನ್ನು ಸೀಝ್ ಮಾಡುವ ಅಧಿಕಾರ ಹೊಂದಿದೆ.
ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ತೀರ್ಮಾನ ಕೈಗೊಂಡಿದ್ದು, ದೆಹಲಿಯ ಮಾಲಿನ್ಯ ಸೂಚ್ಯಂಕವನ್ನು ನಿಯಂತ್ರಣಕ್ಕೆ ತರುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.