ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಇಂಧನ ದರದಲ್ಲಿ ಏರುಪೇರಾಗುತ್ತಿದ್ದು, ಇದರ ನೇರ ಹೊಡೆತ ಈಗ ವಿಮಾನ ಪ್ರಯಾಣಿಕರ ಮೇಲೆ ಬಿದ್ದಿದೆ. ಟಾಟಾ ಸಮೂಹದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ, ತನ್ನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಇಂಧನ ಸರ್ಚಾರ್ಜ್ ಅನ್ನು ಹೆಚ್ಚಿಸಲು ನಿರ್ಧರಿಸಿದೆ.
ವಿಮಾನ ಇಂಧನ ಬೆಲೆಯಲ್ಲಿನ ಏರಿಕೆಯನ್ನು ಸರಿದೂಗಿಸಲು ಏರ್ ಇಂಡಿಯಾ ಈ ಕ್ರಮ ಕೈಗೊಂಡಿದೆ. ಹೊಸ ದರಗಳು ನಾಳೆಯಿಂದಲೇ (ಏಪ್ರಿಲ್ 8) ಜಾರಿಗೆ ಬರಲಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೂ ಇದು ಅನ್ವಯವಾಗಲಿದೆ.
ಪ್ರಯಾಣದ ದೂರಕ್ಕೆ ಅನುಗುಣವಾಗಿ 299 ರೂ. ನಿಂದ 899 ರೂ. ವರೆಗೆ ಸರ್ಚಾರ್ಜ್ ವಿಧಿಸಲಾಗುವುದು.
ವಿದೇಶಿ ಪ್ರಯಾಣಿಕರಿಗೆ ಇದು ದೊಡ್ಡ ಹೊರೆಯಾಗಲಿದ್ದು, ಕನಿಷ್ಠ 24 ಡಾಲರ್ (ಅಂದಾಜು 2,232 ರೂ.) ನಿಂದ ಗರಿಷ್ಠ 280 ಡಾಲರ್ (ಅಂದಾಜು 26,041 ರೂ.) ವರೆಗೆ ದರ ಹೆಚ್ಚಾಗಲಿದೆ.
ಕೇಂದ್ರ ಸರ್ಕಾರವು ದೇಶೀಯ ಇಂಧನ ಬೆಲೆ ಏರಿಕೆಗೆ ಶೇ. 25ರ ಮಿತಿ ಹೇರಿರುವ ಕಾರಣ, ಏರ್ ಇಂಡಿಯಾ ದೇಶೀಯ ವಿಮಾನಗಳಿಗೆ ‘ದೂರದ ಆಧಾರಿತ ಗ್ರಿಡ್ ವ್ಯವಸ್ಥೆ’ಯನ್ನು ಜಾರಿಗೆ ತಂದಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆಗೆ ಯಾವುದೇ ರಿಯಾಯಿತಿ ಇಲ್ಲದ ಕಾರಣ ಅಲ್ಲಿ ದರ ಏರಿಕೆ ಪ್ರಮಾಣ ಹೆಚ್ಚಿದೆ.
ಪೂರ್ವದ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಬಾಂಗ್ಲಾದೇಶಗಳಿಗೆ ಸದ್ಯಕ್ಕೆ ಈ ದರ ಏರಿಕೆ ಅನ್ವಯವಾಗುವುದಿಲ್ಲ. ಅಗತ್ಯ ನಿಯಂತ್ರಕ ಅನುಮತಿಗಳು ದೊರೆತ ನಂತರ ಈ ಮಾರ್ಗಗಳ ದರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.



