ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ರಷ್ಯಾದಿಂದ ಚೀನಾಕ್ಕೆ ಹೊರಟಿದ್ದ ‘ಆಕ್ವಾ ಟೈಟನ್’ ಹೆಸರಿನ ಬೃಹತ್ ಕಚ್ಚಾತೈಲ ನೌಕೆಯು ಪಥ ಬದಲಿಸಿ ನವಮಂಗಳೂರು ಬಂದರಿಗೆ ಆಗಮಿಸಿದ್ದು, ಹಡಗಿನಲ್ಲಿರುವ ಸುಮಾರು 96,000 ಮೆಟ್ರಿಕ್ ಟನ್ ಕಚ್ಚಾತೈಲವನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಘಟಕಕ್ಕೆ ಪೂರೈಸುವ ಕಾರ್ಯ ಭರದಿಂದ ಸಾಗುತ್ತಿದೆ.
ಜನವರಿ ಅಂತ್ಯದಳ್ಳಿ ರಷ್ಯಾದಿಂದ ಹೊರಟಿದ್ದ ಈ ನೌಕೆಯು, ಆಗ್ನೇಯ ಏಷ್ಯಾದ ಜಲಪ್ರದೇಶಕ್ಕೆ ಬರುತ್ತಿದ್ದಂತೆ ಕಾರಣಾಂತರಗಳಿಂದ ಪಥ ಬದಲಿಸಿ ಮಂಗಳೂರು ತಲುಪಿತ್ತು. ನವಮಂಗಳೂರು ಬಂದರಿನಿಂದ 12 ನಾವಿಕ ಮೈಲು ದೂರದಿಂದಲೇ ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್ ತೈಲ ಶುದ್ಧೀಕರಣ ಘಟಕಕ್ಕೆ ಈ ತೈಲವನ್ನು ಈಗ ಮರುಪೂರಣಗೊಳಿಸಲಾಗುತ್ತಿದೆ.
ಇದೇ ವೇಳೆ, ಅಮೆರಿಕದ ಟೆಕ್ಸಾಸ್‌ನಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ ಹೊತ್ತ ‘ಪಿಕ್ಸಿಸ್ ಪಯೋನಿಯರ್’ ಎಂಬ ಕಾರ್ಗೋ ಹಡಗು ಕೂಡ ಮಂಗಳೂರು ಬಂದರನ್ನು ತಲುಪಿದೆ. ಮಾ. 14 ರಂದು ಅಮೆರಿಕದಿಂದ ಹೊರಟಿದ್ದ ಈ ಹಡಗು 16,714 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ತಂದಿದೆ.
ವಿಶೇಷವೆಂದರೆ, ವಿದೇಶದಿಂದ ನೇರವಾಗಿ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್‌ಪಿಜಿ ಹಡಗು ಇದಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಈ ಇಂಧನ ನೌಕೆಗಳ ಆಗಮನವು ರಾಜ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.



