ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ್ಮನಿರ್ಭರ ಭಾರತದಡಿ ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗ ಹೊರಟಿರೊ ಭಾರತದ ಪ್ರಯತ್ನ ಯಶಸ್ವಿಯಾಗಿ ಸಾಗುತ್ತಿದ್ದು ಇದೀಗ ಈ ಪಟ್ಟಿಗೆ ʼINS ಮರ್ಮುಗೋʼ ಹೊಸಸೇರ್ಪಡೆಯಾಗಿದೆ. ಇದು ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲತುಂಬಲಿದೆ. ದೇಶೀಯವಾಗಿ ನಿರ್ಮಾಣಗೊಂಡ ಈ ಕ್ಷಿಪಣಿ ವಿಧ್ವಂಸಕ ನೌಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂಬೈ ಕಡಲ ತೀರದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ನೌಕಾಪಡೆಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು INS ಮೊರ್ಮುಗೋವು ಭಾರತೀಯ ಕಡಲ ಸಾಮರ್ಥ್ಯಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಮಾಡಲಿದೆ ಮತ್ತು ಭಾರತದಲ್ಲಿ ತಯಾರಾದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾಗಿದೆ. “ಐಎನ್‌ಎಸ್ ಮೊರ್ಮುಗಾವೊ ವಿಶ್ವದ ಅತ್ಯಂತ ತಾಂತ್ರಿಕವಾಗಿ ಸುಧಾರಿತ ಕ್ಷಿಪಣಿ ವಾಹಕಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. “ಐಎನ್‌ಎಸ್ ಮೊರ್ಮುಗೋದಲ್ಲಿನ ವ್ಯವಸ್ಥೆಗಳು ಪ್ರಸ್ತುತ ಮಾತ್ರವಲ್ಲದೆ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದು ನಮ್ಮ ಸ್ಥಳೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ, ನಾವು ವಿಶ್ವಕ್ಕಾಗಿ ಹಡಗು ನಿರ್ಮಾಣವನ್ನು ಮಾಡುತ್ತೇವೆ” ಎಂದು ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
ಈ ಯುದ್ಧ ನೌಕೆಯು 163 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದೆ, ಸಂಪೂರ್ಣವಾಗಿ ಲೋಡ್ ಮಾಡಿದಾಗ 7400 ಟನ್‌ಗಳನ್ನು ಸ್ಥಳಾಂತರಿಸುವ ಶಕ್ತಿ ಹೊಂದಿದ್ದು ಪ್ರತೀಗಂಟೆಗೆ ಗರಿಷ್ಠ 30 ನಾಟಿಕಲ್ ಮೈಲ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 75ಶೇಕಡಾದಷ್ಟು ಸ್ವದೇಶೀ ಉಪಕರಣಗಳನ್ನು ಬಳಸಲಾಗಿದೆ. ಹಡಗು ಆಧುನಿಕ ಕಣ್ಗಾವಲು ರಾಡಾರ್‌ನೊಂದಿಗೆ ಸಜ್ಜುಗೊಳಿಸಲ್ಪಟ್ಟಿದೆ, ಅಲ್ಲದೇ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯಗಳು ರಾಕೆಟ್ ಲಾಂಚರ್‌ಗಳು, ಟಾರ್ಪಿಡೊ ಲಾಂಚರ್‌ಗಳನ್ನು ಹೊಂದಿದೆ. ಪರಮಾಣು, ಜೈವಿಕ ಮತ್ತು ರಾಸಾಯನಿಕ (NBC) ಯುದ್ಧದ ಸನ್ನಿವೇಶಗಳಲ್ಲಿ ಹೋರಾಡಬಲ್ಲ ಸಾಮರ್ಥ್ಯವೂ ಇದಕ್ಕಿದೆ.