ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ರಾಮ ಭಕ್ತರ ಕನಸು ನನಸಾಗಿದೆ. ಅನೇಕರು ಆಗಮಿಸಿ ಬಾಲರಾಮನ ದರುಶನ ಪಡೆಯುತ್ತಿದ್ದಾರೆ.
ಇದೀಗ ಆಯೋಧ್ಯೆಯಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಇಂಡಿಗೋ ಗಗನಸಖಿ ಕೆಳಗಿಳಿದು ನೆಲಕ್ಕೆ ಶಿರ ಬಾಗಿ ಶ್ರೀರಾಮನಿಗೆ ನಮಿಸಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದೆ ಜೊತೆಗೆ ಪರ ವಿರೋಧ ಚರ್ಚೆಗೂ ಕಾರಣವಾಗಿದೆ.
ಆಯೋಧ್ಯೆಯ ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗಿದೆ. ಪ್ರಯಾಣಿಕರು ಇಳಿದ ಬೆನ್ನಲ್ಲೇ ಗಗನಸಖಿಯೂ ಕೆಳಗಿಳಿದಿದ್ದಾಳೆ. ಕೆಳಗಿಳಿದು ಬಂದ ಗಗನಸಖಿ, ಆಯೋಧ್ಯೆ ಶ್ರೀರಾಮ ಮಂದಿರದತ್ತ ಮುಖ ಮಾಡಿ ಭಕ್ತಿಯಿಂದ ನಮಿಸಿದ್ದಾಳೆ. ಶಿರಭಾಗಿ ನಮಿಸಿದ ಈಕೆಯ ವಿಡಿಯೋ ಭಾರಿ ವೈರಲ್ ಆಗಿದೆ.
ಈ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ. ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಕೂಡ ಈ ವಿಡಿಯೋ ಹಂಚಿಕೊಂಡು, ಇಂತಹ ಗಗನಸಖಿಯನ್ನು ಪಡೆದಿರುವ ಇಂಡಿಗೋ ಏರ್‌ಲೈನ್ಸ್ ಹೆಮ್ಮೆಪಡಬೇಕು. ಇದು 500 ವರ್ಷಗಳ ಬಳಿಕ ಆಯೋಧ್ಯೆಗೆ ಮರಳಿದ ಶ್ರೀರಾಮನಿಗೆ ಗಗನಸಖಿ ನೀಡಿದ ಭಕ್ತಿಯ ನಮನ ಎಂದು ಬರೆದುಕೊಂಡಿದ್ದಾರೆ.
ಇನ್ನು ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.ಜೈ ಶ್ರೀರಾಮ್, ಆಯೋಧ್ಯೆ ಎಂದರೆ ಶ್ರೀರಾಮನ ಭಕ್ತಿ. ಶ್ರೀರಾಮನ ಜೊತೆ ಈ ದೇಶ ಬೆಸೆದುಕೊಂಡಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಆದರೆ ಮತ್ತೆ ಕೆಲವರು ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಬೆಂಗಳೂರು ವೋಕಲ್ ಅನ್ನೋ ಎಕ್ಸ್ ಖಾತೆ ಇದು ವಿಡಿಯೋಗಾಗಿ ಮಾಡಿದ ನಾಟಕ ಎಂದಿದೆ. ಇಲ್ಲಿ ಕ್ಯಾಮಾರಮ್ಯಾನ್ ಆಕೆ ಬಂದು ನಮಿಸಲು ಕಾಯುತ್ತಿದ್ದಾನೆ. ಈ ರೀತಿಯ ವಿಡಿಯೋ ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು. ನಾಗರೀಕರ ವಿಮಾನಯಾನ ಇಲಾಖೆ ಈ ಕುರಿತು ಗಮನಹರಿಸಬೇಕು, ವಿಡಿಯೋ ರೆಕಾರ್ಡ್, ಫೋಟೋ ನಿಷೇಧವಿದ್ದರೂ ಚಿತ್ರೀಕರಿಸಿದ್ದಾರೆ. ನಿಯಮ ಉಲ್ಲಂಘಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
ಇದು ರೀಲ್ ದುನಿಯಾ, ಹೀಗಾಗಿ ಎಲ್ಲವೂ ರೀಲ್, ಯಾವುದು ರಿಯಲ್ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಪರ ವಿರೋಧ ಕಮೆಂಟ್ ಶುರುವಾಗಿದೆ.