ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಶತಕವನ್ನು ಸಿಡಿಸಿದ್ದಾರೆ.
ಆರಂಭದಿಂದಲೂ ಆಸೀಸ್ ಬೌಲರ್ಗಳ ಬೆವರಿಳಿಸಿದ ರುತುರಾಜ್ ಕೇವಲ 52 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 222 ರನ್ ಗಳಿಸಿದೆ. ತಂಡದ ಪರ ರುತುರಾಜ್ ಗಾಯಕ್ವಾಡ್ 123 ರನ್ ಗಳಿಸಿ ಅಜೇಯರಾಗಿ ಉಳಿದರೆ, ಸೂರ್ಯಕುಮಾರ್ ಯಾದವ್ 39 ರನ್ ಹಾಗೂ ತಿಲಕ್ ವರ್ಮಾ ಕೂಡ 31 ರನ್ಗಳ ಕೊಡುಗೆ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕಳೆದ ಪಂದ್ಯದಂತೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ 3 ಓವರ್‌ಗಳ ಮಧ್ಯದಲ್ಲಿಯೇ ತಂಡ ಯಶಸ್ವಿ ಜೈಸ್ವಾಲ್ (6) ಮತ್ತು ಇಶಾನ್ ಕಿಶನ್ (0) ಅವರ ವಿಕೆಟ್ ಕಳೆದುಕೊಂಡು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತು. ನಂತರ ಗಾಯಕ್ವಾಡ್ ಜೊತೆಯಾದ ನಾಯಕ ಸೂರ್ಯಕುಮಾರ್ ಯಾದವ್ (39 ರನ್) ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಬಳಿಕ ನಾಯಕ ಸೂರ್ಯ ಔಟಾದ ತಕ್ಷಣ ರನ್ ರೇಟ್ ಸುಧಾರಿಸುವ ಜವಾಬ್ದಾರಿಯನ್ನು ಹೊತ್ತ ರುತುರಾಜ್ ಗಾಯಕ್ವಾಡ್, ಕೊನೆಯವರೆಗೂ ಭಾರತದ ಇನ್ನಿಂಗ್ಸ್ ನಿಭಾಯಿಸಿದರು.ಇತ್ತ ತಿಲಕ್ ವರ್ಮಾ ಸಾಥ್ ಕೊಟ್ಟರು . ಔಟಾಗದೇ 31 ರನ್ ( 24 ಎಸೆತ, 4 ಬೌಂಡರಿ) ಹೊಡೆದರು.