ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಮುಖ್ಯಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಗಂಭೀರ್ ಅವರೇ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯ ಆಕಾಂಕ್ಷಿಯಾಗಿರುವ ಗಂಭೀರ್ ಅವರನ್ನು ಬಿಸಿಸಿಐ ಸಲಹಾ ಸಮಿತಿಯು ಸಂದರ್ಶನ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೆ ಶ್ರೀಲಂಕಾ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿ ವೇಳೆಗೆ ಗಂಭೀರ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ನಡುವೆ ಮುಖ್ಯ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂದರ್ಭ ಉತ್ತರಿಸುವುದು ಕಷ್ಟ. ನಾನು ಭವಿಷ್ಯದ ಬಗ್ಗೆ ತುಂಬಾ ಯೋಚಿಸುತ್ತಿಲ್ಲ. ನೀವು ನನಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.
ಈಗ ಇರುವ ಜವಾಬ್ದಾರಿಯನ್ನು (ಕೆಕೆಆರ್ ತಂಡದ ಮೆಂಟರ್) ಆನಂದಿಸುತ್ತಿದ್ದೇನೆ. ಈಗಷ್ಟೇ ಐಪಿಎಲ್ನಲ್ಲಿ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಆಗಿದೆ. ಈ ಕ್ಷಣವನ್ನು ಆನಂದಿಸೋಣ. ಭವಿಷ್ಯದಲ್ಲಿ ಏನು ನಡೆಯಬೇಕೋ ಅದು ನಡೆಯಲಿದೆ. ಸದ್ಯ ತುಂಬಾ ಖುಷಿಯಲ್ಲಿದ್ದೇನೆ. ಕೋಲ್ಕತ್ತಾ ಜನರನ್ನು ಖುಷಿಪಡಿಸುವುದೇ ನನ್ನ ಕೆಲಸ. ನೀವು ಖುಷಿಪಟ್ಟರೆ ನನಗೂ ಖುಷಿ ಎಂದು ಹೇಳಿದ್ದಾರೆ.