ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. 9 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡದ ಗೆಲುವಿನ ಹೀರೋ ಯುವ ವೇಗಿ ಹರ್ಷಿತ್ ರಾಣಾ. ಆಸೀಸ್ ತಂಡ ಮೊದಲು ಬ್ಯಾಟ್ ಮಾಡಿ 46.4 ಓವರ್‌ಗಳಲ್ಲಿ ಕೇವಲ 236 ರನ್‌ಗಳಿಗೆ ಆಲೌಟ್ ಆಗಿತು. ಈ ತ್ವರಿತ ಆಲೌಟ್‌ಗೆ ಪ್ರಮುಖ ಕಾರಣ ರಾಣಾ ಅವರ ನಿಖರ ಬೌಲಿಂಗ್ ಪ್ರದರ್ಶನ.
ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಕೇವಲ 8.4 ಓವರ್‌ಗಳಲ್ಲಿ 39 ರನ್ ನೀಡಿ 4 ವಿಕೆಟ್ ಕಬಳಿಸಿದರು. ಆದರೆ ಈ ಅದ್ಭುತ ಪ್ರದರ್ಶನದ ಹಿಂದೆ ಕೋಚ್ ಗೌತಮ್ ಗಂಭೀರ್ ನೀಡಿದ ಎಚ್ಚರಿಕೆಯೇ ಪ್ರಮುಖ ಪಾತ್ರ ವಹಿಸಿದ್ದೆಂದು ವರದಿಯಾಗಿದೆ. ಪಂದ್ಯಕ್ಕೂ ಮುನ್ನ ಗಂಭೀರ್, ರಾಣಾಗೆ “ಇದು ನಿನ್ನ ಕೊನೆಯ ಅವಕಾಶ, ಉತ್ತಮ ಪ್ರದರ್ಶನ ನೀಡು ಇಲ್ಲದಿದ್ದರೆ ತಂಡದಿಂದ ಕೈ ಬಿಡುತ್ತೇನೆ” ಎಂದು ಕಠಿಣ ಎಚ್ಚರಿಕೆ ನೀಡಿದ್ದರು.
ಆಸ್ಟ್ರೇಲಿಯಾ ಸರಣಿಗೆ ಹರ್ಷಿತ್ ರಾಣಾ ಆಯ್ಕೆಯಾದ ವಿಚಾರದಲ್ಲೇ ವಿವಾದ ಉಂಟಾಗಿತ್ತು. ಕೆಲ ಮಾಜಿ ಆಟಗಾರರು ಗೌತಮ್ ಗಂಭೀರ್‌ರನ್ನು ಗುರಿಯಾಗಿಸಿ ರಾಣಾ ಆಯ್ಕೆಯ ಬಗ್ಗೆ ಪ್ರಶ್ನೆ ಎತ್ತಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ರಾಣಾ ಮೇಲೆ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಮೂರನೇ ಪಂದ್ಯಕ್ಕೂ ಮುನ್ನ ಮತ್ತೆ ಅವಕಾಶ ನೀಡಿ ವಿಶ್ವಾಸವಿಟ್ಟಿದ್ದರು.
ಹರ್ಷಿತ್ ಬಾಲ್ಯದ ಕೋಚ್ ಶರ್ವಣ್ ಹೇಳುವ ಪ್ರಕಾರ, ಪಂದ್ಯಕ್ಕೂ ಮುನ್ನ ರಾಣಾ ಆತ್ಮವಿಶ್ವಾಸ ಕಳೆದುಕೊಂಡಿದ್ದರು. ಆಗ ಅವರು ಶರ್ವಣ್ ಅವರನ್ನು ಕರೆಮಾಡಿ ಒತ್ತಡದಲ್ಲಿರುವುದಾಗಿ ತಿಳಿಸಿದ್ದರು. ಶರ್ವಣ್ ಅವರು ರಾಣಾಗೆ “ಗೌತಮ್ ಗಂಭೀರ್ ಪ್ರತಿಭೆಯನ್ನು ಗುರುತಿಸುವ ವ್ಯಕ್ತಿ. ಅವರು ನಿನ್ನನ್ನು ಬೆಂಬಲಿಸುತ್ತಿದ್ದಾರೆ. ಅವರ ಗದರಿಕೆಯನ್ನು ಪಾಸಿಟಿವ್ ಆಗಿ ತೆಗೆಕೋ” ಎಂದು ಧೈರ್ಯ ತುಂಬಿದ್ದರು.
ಅದರ ನಂತರದ ದಿನವೇ ರಾಣಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಆಸೀಸ್ ಬ್ಯಾಟ್ಸ್‌ಮನ್‌ರನ್ನು ಬೌನ್ಸರ್ ಎಸೆತಗಳಿಂದ ಕಂಗಾಲುಗೊಳಿಸಿ, ಗೌತಮ್ ಗಂಭೀರ್ ಅವರ ವಿಶ್ವಾಸವನ್ನು ಕಾಪಾಡಿದರು. ಈ ಗೆಲುವಿನಿಂದ ರಾಣಾ ತನ್ನ ಆಯ್ಕೆಯನ್ನು ಟೀಕಿಸಿದವರಿಗೆ ಬೌಲಿಂಗ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ.

 
                                    