ಹೊಸದಿಗಂತ ಹಾವೇರಿ :
ರಾಜ್ಯದ ಗಮನ ಸೆಳೆದಿದ್ದ ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಏಳು ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಬೇಲ್ ಮಂಜೂರು ಮಾಡಿತ್ತು. ಆದರೆ ಬೇಲ್ ಸಿಕ್ಕ ಬೆನ್ನಲ್ಲೇ ಈ ಆರೋಪಿಗಳು ತಮ್ಮ ಸ್ವಂತ ಊರಾದ ಅಕ್ಕಿಆಲೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ.
ಐದು ಕಾರುಗಳಲ್ಲಿ ಸುಮಾರು 20 ಜನ ಹಿಂಬಾಲಕರೊಂದಿಗೆ ಅಕ್ಕಿಆಲೂರಿನಲ್ಲಿ ರೋಡ್ ಶೋ ನಡೆಸಿದ್ದರು. ಇದೀಗ ರೋಡ್ ಶೋ ನಡೆಸಿದ ಆರೋಪಿಗಳ ಮೇಲೆ ಮತ್ತೆ ಪ್ರಕರಣ ದಾಖಲಿಸಲು ಪೊಲೀಸರ ಸಿದ್ದತೆ ನಡೆಸಿದ್ದಾರೆ.
ಶುಕ್ರವಾರ ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಕೋರ್ಟ್ ಆವರಣದಿಂದ ಹೊರಬರುತ್ತಿದ್ದಂತೆಯೇ ರೋಡ್ ಶೋ ನಡೆಸಿದ್ದ 7 ಪ್ರಮುಖ ಆರೋಪಿಗಳಲ್ಲಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಹಾನಗಲ್ ಪೊಲೀಸರು ಸಜ್ಜಾಗಿದ್ದಾರೆ.
ಮತ್ತೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಕೂಡದು ಎಂಬ ನಿಯಮಗಳಡಿ ಬೇಲ್ ಮಂಜೂರಾಗಿತ್ತು. ಆದರೆ ಬೇಲ್ ಪಡೆದು ಜೈಲಿಂದ ವಾಪಾಸ್ ಆಗುವಾಗ ರೋಡ್ ಶೋ ನಡೆಸಿ ಪುಂಡಾಟಿಕೆ ಮೆರೆದ ಹಿನ್ನೆಲೆ ಬೇಲ್ ಷರತ್ತು ಉಲ್ಲಂಘನೆ ಅಂಶದ ಮೇಲೆ ವಶಕ್ಕೆ ಪಡೆದ ಪೊಲೀಸರು ಮತ್ತೆ ಕೇಸ್ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.