ಹೊಸದಿಗಂತ ವರದಿ, ಉಳ್ಳಾಲ:
ಪಶ್ಚಿಮ ಬಂಗಾಳ ಮೂಲದ ಕೂಚ್ ಬಿಹಾರದ ಹತ್ತೊಂಭತ್ತು ವರುಷದ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಗಳೂರಿನ ಉಳ್ಳಾಲದ ಕುತ್ತಾರು ರಾಣಿಪುರ ರಿಷಿವನ ಕಾನ್ವೆಂಟ್ ಬಳಿಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
ಕೆಲಸ ಕೊಡಿಸುವ ನೆಪದಲ್ಲಿ ರಿಕ್ಷಾ ಚಾಲಕನೋರ್ವನು ಹೊರ ರಾಜ್ಯದ ಯುವತಿಯನು ಪುಸಲಾಯಿಸಿ ಆಕೆಗೆ ಮದ್ಯ ಕುಡಿಸಿ ಮತ್ತಿಬ್ಬರು ಸಹಚರರೊಂದಿಗೆ ಗ್ಯಾಂಗ್ ರೇಪ್ ನಡೆಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಕ್ಷಿಪ್ರವಾಗಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.
ಆಟೋ ರಿಕ್ಷಾ ಚಾಲಕ ಮೂಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38) ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸದ ಕುಂಪಲ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37) ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತ ಯುವತಿಯು ಕಾಸರಗೋಡಿನ ಉಪ್ಪಳದ ಫ್ಲೈವುಡ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದು ಸ್ನೇಹಿತನ ಜೊತೆ ಉದ್ಯೋಗ ಅರಸಿ ಬುಧವಾರದಂದು ರೈಲಿನಲ್ಲಿ ಮಂಗಳೂರಿಗೆ ಬಂದಿದ್ದಳು.
ಮಂಗಳೂರಿನಲ್ಲಿ ಯುವತಿಯು ತನ್ನ ಜೊತೆ ಬಂದಿದ್ದ ಸ್ನೇಹಿತನೊಂದಿಗೆ ಜಗಳವಾಡಿದ್ದು ಆಕೆಯ ಮೊಬೈಲ್ ಗೂ ಹಾನಿಯುಂಟಾಗಿತ್ತು. ಈ ವೇಳೆ ಯುವತಿಯು ಆರೋಪಿ ಪ್ರಭುರಾಜ್ ಎಂಬವನ ರಿಕ್ಷಾ ಹತ್ತಿದ್ದು ,ರಿಕ್ಷಾ ಚಾಲಕ ಆಕೆಗೆ ಮೊಬೈಲ್ ರಿಪೇರಿ ಅಂಗಡಿಗೆ ಕರಕೊಂಡು ಹೋಗಿ ಸಹಕರಿಸಿದ್ದಾನೆ. ಸಂತ್ರಸ್ತ ಯುವತಿಗೆ ಊಟ ಕೊಡಿಸಿದ್ದಲ್ಲದೆ,ಆಕೆಯ ಕೋರಿಕೆ ಮೇರೆಗೆ ರಿಕ್ಷಾ ಚಾಲಕ ಮತ್ತೆ ಆಕೆಯನ್ನ ರೈಲು ನಿಲ್ದಾಣಕ್ಕೆ ಬಿಡಲು ಒಪ್ಪಿದ್ದಾನೆ. ಈ ಮಧ್ಯೆ ಆಟೋ ಚಾಲಕನು ಯುವತಿಯ ಪರಿಚಯ ಬೆಳೆಸಿದ್ದು ಆಕೆಗೆ ರೊಟ್ಟಿ ಅಂಗಡಿಯೊಂದರಲ್ಲಿ ಕೆಲಸ ಕೊಡಿಸೋದಾಗಿ ಅಮಿಷ ತೋರಿಸಿ ತನ್ನ ಆಟೋ ರಿಕ್ಷಾದಲ್ಲಿ ಉಳ್ಳಾಲ ತಾಲೂಕಿನ ಕುತ್ತಾರಿನತ್ತ ಕರಕೊಂಡು ಹೋಗಿದ್ದಾನೆ.
ದಾರಿ ಮಧ್ಯದಲ್ಲಿ ಮತ್ತೆ ಇಬ್ಬರು ಸಚಚರರನ್ನು ರಿಕ್ಷಾಕ್ಕೆ ಹತ್ತಿಸಿಕೊಂಡಿದ್ದು ಆರೋಪಿಗಳು ಯುವತಿಗೆ ಮದ್ಯ ಕುಡಿಸಿದ್ದಾರಂತೆ. ನಶೆಯಿಂದ ಪ್ರಜ್ನಾ ಹೀನ ಸ್ಥಿತಿಯಲ್ಲಿದ್ದ ಯುವತಿಯು ಎಚ್ಚೆತ್ತಾಗ ತಾನು ರಿಕ್ಷಾ ಚಾಲಕ ಸೇರಿ ಮೂವರೊಂದಿಗೆ ಕಾರಿನಲ್ಲಿದ್ದನ್ನ ಕಂಡು ಬೊಬ್ಬಿಟ್ಟಿದ್ದಾಳೆ. ಯುವತಿಯ ಚೀರಾಟಕ್ಕೆ ಬೆದರಿದ ಆರೋಪಿಗಳು ಯುವತಿಯನ್ನ ರಾಣಿಪುರದ ನೇತ್ರಾವತಿ ನದಿ ತೀರದ ರಸ್ತೆ ಬದಿ ಬಿಟ್ಟು ಓಡಿದ್ದಾರೆ. ಯುವತಿಯು ಮಧ್ಯರಾತ್ರಿ ಸುಮಾರು 1.30 ಗಂಟೆ ವೇಳೆ ಅತ್ಯಾಚಾರಿಗಳಿಂದ ತಪ್ಪಿಸಿ ರಾಣಿಪುರದ ಸ್ಥಳೀಯರೋರ್ವರ ಮನೆಯ ಬಾಗಿಲನ್ನು ತಟ್ಟಿದ್ದು ಕುಡಿಯಲು ನೀರು ಕೇಳಿದ್ದಾಳೆ. ಯುವತಿಯ ಮೈಮೇಲೆ ತರಚಿದ ಗಾಯಗಳಾಗಿದ್ದು,ಗಾಬರಿಗೊಂಡ ಸ್ಥಳೀಯರು ಆಕೆಯನ್ನ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ತಾನು ಪ್ರಜ್ನಾಹೀನ ಸ್ಥಿತಿಯಲ್ಲಿದ್ದ ವೇಳೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಕುರಿತಾಗಿ ಸಂತ್ರಸ್ತ ಯುವತಿಯು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾಳೆ.ಆಸ್ಪತ್ರೆಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ಸೇರಿದಂತೆ ಪೊಲೀಸರ ತನಿಖಾ ತಂಡವು ಭೇಟಿ ನೀಡಿ ಘಟನಾ ಸ್ಥಳದ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದೆ.ವೈದ್ಯಕೀಯ ವರದಿ ಬಂದ ನಂತರವಷ್ಟೆ ಅತ್ಯಾಚಾರದ ಬಗ್ಗೆ ತಿಳಿಯಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.