ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಪರಿಸರ, ಕೃಷಿ ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿರುವ ಗಂಗಾವಳಿ (ಬೇಡ್ತಿ) ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿದ್ದಾರೆ.
ಗುರುವಾರ ಬೇಡ್ತಿ ಅಘನಾಶಿನಿ ತಿರುವು ಯೋಜನೆ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಪ್ರತ್ಯೇಕ ಮನವಿ ನೀಡಿದರು.
ಸರ್ಕಾರ ಪ್ರಸ್ತಾಪಿಸಿರುವ ನದಿತಿರುವು ಯೋಜನೆಗಳ ಕುರಿತು ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ನದಿಗಳ ಸ್ವಾಭಾವಿಕ ಹರಿವಿಗೆ ತಡೆ ಉಂಟುಮಾಡುವುದರಿಂದ ಪರಿಸರ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಗಂಗಾವಳಿ ನದಿ ಉತ್ತರ ಕನ್ನಡದ ಪ್ರಮುಖ ನದಿಗಳಲ್ಲೊಂದಾಗಿದ್ದು, ಅದರ ನೀರು ಸ್ಥಳೀಯ ಜನರ ಕುಡಿಯುವ ನೀರು, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಅಗತ್ಯಗಳಿಗೆ ಮಹತ್ವದ್ದಾಗಿದೆ.
ಇದನ್ನೂ ಓದಿ:
ನದಿಯ ನೀರನ್ನು ಬೇರೆಡೆಗೆ ತಿರುಗಿಸಿದರೆ ನದಿಯ ಸಹಜ ಹರಿವು ಕುಂಠಿತವಾಗಿ, ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಆತಂಕವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅದೇ ರೀತಿ ಅಘನಾಶಿನಿ ನದಿಯೂ ಜಿಲ್ಲೆಯ ಪರಿಸರ ಹಾಗೂ ಸ್ಥಳೀಯ ಆರ್ಥಿಕ ಚಟುವಟಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ನದಿ ತಿರುವಿನಿಂದ ಮೀನುಗಾರಿಕೆ ಸೇರಿದಂತೆ ನದಿಯನ್ನೇ ಅವಲಂಬಿಸಿರುವ ಜನರ ಜೀವನೋಪಾಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ನದಿಗಳ ಹರಿವಿನ ಬದಲಾವಣೆಯಿಂದ ಪರಿಸರ ಸಮತೋಲನಕ್ಕೂ ಹಾನಿಯಾಗಬಹುದು ಎಂದು ರೂಪಾಲಿ ನಾಯ್ಕ ಎಚ್ಚರಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡದ ನೈಸರ್ಗಿಕ ಸಂಪನ್ಮೂಲಗಳಿಗೆ ಧಕ್ಕೆ ತರುವ ಯೋಜನೆಗಳನ್ನು ಜಾರಿಗೊಳಿಸಬಾರದು. ಜಿಲ್ಲೆಯ ಜನರ ಹಿತ ಹಾಗೂ ಪರಿಸರ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಗಂಗಾವಳಿ (ಬೇಡ್ತಿ) ಮತ್ತು ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.



