ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಕಸ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿ ಮಾಡಲು ಏಪ್ರಿಲ್ 1ರಿಂದ ಮನೆಮನೆಗಳಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಲು ನಗರ ಆಡಳಿತ ಮುಂದಾಗಿದೆ. ಹೊಸ ನಿಯಮದ ಪ್ರಕಾರ, ಹಸಿ, ಒಣ, ನೈರ್ಮಲ್ಯ ಹಾಗೂ ವಿಶೇಷ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡದಿದ್ದರೆ ದಂಡ ವಿಧಿಸಲಾಗುತ್ತದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಗಳು–2026 ಅನ್ವಯ ಈ ಕ್ರಮ ಜಾರಿಯಾಗುತ್ತಿದ್ದು, ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ದೊಡ್ಡ ಪ್ರಮಾಣದ ಮಿಶ್ರ ಕಸವನ್ನು ನಿಯಂತ್ರಿಸುವುದು ಇದರ ಉದ್ದೇಶವಾಗಿದೆ.
ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ ₹500 ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಇದೇ ತಪ್ಪು ಮರುಕಳಿಸಿದರೆ ₹1,000 ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಪಾಲಿಸದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ನಗರದಲ್ಲಿ ದಿನಕ್ಕೆ ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಬಹುತೇಕ ಮನೆಗಳಿಂದ ಮಿಶ್ರ ಕಸವೇ ನೀಡಲಾಗುತ್ತಿದೆ. ಇದರಿಂದ ಪೌರಕಾರ್ಮಿಕರ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದ್ದು, ಆರೋಗ್ಯ ಸಮಸ್ಯೆಗಳೂ ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮನೆಮಟ್ಟದಲ್ಲೇ ಕಸ ವಿಂಗಡಣೆಗೆ ಒತ್ತು ನೀಡಲಾಗಿದೆ.
ಹೊಸ ನಿಯಮದ ಪ್ರಕಾರ, ಕಸ ಸಂಗ್ರಹಿಸುವ ವಾಹನ ಸಿಬ್ಬಂದಿ ವಿಂಗಡಿಸದ ಕಸವನ್ನು ಸ್ವೀಕರಿಸುವುದಿಲ್ಲ. ಜೊತೆಗೆ ಸಿಬ್ಬಂದಿಗೆ ಸುರಕ್ಷತಾ ಕೈಗವಸು, ಮುಖಗವಸು, ಗಮ್ಬೂಟ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳ ಬಳಕೆಯೂ ಕಡ್ಡಾಯವಾಗಿದೆ.
ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ಮರುಬಳಕೆ ಹಾಗೂ ಕಂಪೋಸ್ಟ್ ಪ್ರಕ್ರಿಯೆ ಸುಲಭವಾಗಲಿದೆ. ಹಸಿ ಕಸವನ್ನು ಗೊಬ್ಬರವಾಗಿ ಬಳಸಲು ಸಾಧ್ಯವಾಗುವುದರಿಂದ ಪರಿಸರ ಸ್ವಚ್ಛತೆಗೆ ಸಹಕಾರಿಯಾಗಲಿದೆ.



