ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇತ್ತೀಚೀಗೆ ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರು ಕಲಾಗಿದ್ದು, ಇದೀಗ ಎಲ್ಲವು ಸರಿಯಾಯಿತು ಎನ್ನುವಾಗ ಬೆಳ್ಳುಳ್ಳಿ ದರ ಏರಿಕೆಯ ಬಿಸಿ ತಟ್ಟಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 300 ರಿಂದ 400 ರೂ. ತಲುಪಿದೆ.
ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆ ಜಿಲ್ಲೆಗಳಲ್ಲಿ ಬೆಳ್ಳುಳ್ಳಿಯನ್ನುಪ್ರಧಾನವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದಲ್ಲಿ ಪ್ರತಿಕೂಲ ವಾತಾವರಣ ಕಾರಣದಿಂದಾಗಿ ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ. ಹೀಗಾಗಿ ಮುಂಬೈ ಸಗಟು ವ್ಯಾಪಾರಿಗಳು ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೆಳ್ಳುಳ್ಳಿಯನ್ನು ಖರೀದಿ ಮಾಡುತ್ತಿದ್ದು, ಸಾಗಾಟ ವೆಚ್ಚ ಮತ್ತು ಇತರೆ ಸ್ಥಳೀಯ ಸುಂಕಗಳನ್ನು ಏರಿಕೆ ಮಾಡಿರುವುದರಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
ಕಳೆದ ಕೆಲವು ವಾರಗಳಿಗೆ ಹೋಲಿಕೆ ಮಾಡಿದರೆ, ಬೆಳ್ಳುಳ್ಳಿ ಬೆಲೆ ದ್ವಿಗುಣಗೊಂಡಿದೆ. ಮುಂಬೈನ ವಾಶಿಯಲ್ಲಿರುವ ಎಪಿಎಂಸಿ ಯಾರ್ಡ್ನ ವ್ಯಾಪಾರಸ್ಥರು, ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ಎಪಿಎಂಸಿ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 150 ರಿಂದ 250 ರೂ.ನಂತೆ ಬೆಳ್ಳುಳ್ಳಿ ಮಾರಾಟವಾಗುತ್ತಿದೆ. ಒಂದು ತಿಂಗಳ ಹಿಂದಷ್ಟೇ ಕೆಜಿಗೆ 100-150 ರೂ. ಇತ್ತು.
ಪ್ರಸ್ತುತ ದರ ಬದಲಾವಣೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಕೆಜಿಗೆ 300 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದ್ದು, ಗ್ರಾಹಕರನ್ನು ಕಂಗಾಲಾಗಿಸಿದೆ.
ಊಟಿ ಮತ್ತು ಮಲಪ್ಪುರಂನಿಂದ ಬೆಳ್ಳುಳ್ಳಿ ಪೂರೈಕೆಯು ಗಣನೀಯವಾಗಿ ಕುಸಿದಿದ್ದು, ಇದು ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಎಪಿಎಂಸಿ ವರ್ತಕರು ತಿಳಿಸಿದ್ದಾರೆ.