ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಲಿ ಸಮರದ ಹಿನ್ನೆಲೆಯಲ್ಲಿ ದೇಶಕ್ಕೂ ತಟ್ಟಿರುವ ಎಲ್ಪಿಜಿ ಅಭಾವ ಈಗ ಕರಾವಳಿಯ ಪುಣ್ಯಕ್ಷೇತ್ರಗಳನ್ನೂ ಬಿಟ್ಟಿಲ್ಲ!
ನಿತ್ಯ ಆಗಮಿಸುವ ಸಹಸ್ರಾರು ಮಂದಿ ಭಕ್ತರಿಗೆ ಅನ್ನದಾಸೋಹ ನೀಡುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಹಿತ ಬಹುತೇಕ ಎಲ್ಲಾ ದೇಗುಲಗಳಲ್ಲಿ ಈಗ ಸಂಕಷ್ಟ ಎದುರಾಗಿದೆ.
ಕುಕ್ಕೆಯಲ್ಲಿ ಉಪಹಾರ ಮೆನು ಬದಲಾವಣೆ
ಎಲ್ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರದಿಂದಲೇ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ. ಇಲ್ಲಿ ಪ್ರತಿದಿನ ಬೆಳಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು, ಇದೀಗ ಗ್ಯಾಸ್ ಪೂರೈಕೆ ವ್ಯತ್ಯಯದಿಂದ ಬೇಯಿಸಿ ನೀಡುವ ತಿನಿಸುಗಳ ಬದಲಾಗಿ, ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ. ಸದ್ಯ ಇಲ್ಲಿ ಮುಂದಿನ ಮೂರು ದಿನಕ್ಕೆ ಬೇಕಾಗುವಷ್ಟು ಮಾತ್ರ ಗ್ಯಾಸ್ ಲಭ್ಯವಿದ್ದು, ಈ ನಡುವೆ ಎಲ್ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬರದಿದ್ದಲ್ಲಿ ಸಮಸ್ಯೆ ಎದುರಾಗಲಿದೆ.
ದಿನಕ್ಕೆ 20 ಸಿಲಿಂಡರ್ ಗ್ಯಾಸ್ ಪೊರೈಕೆ ಮಾಡಲು ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ಈಗಾಗಲೇ ದೇವಸ್ಥಾನದಿಂದ ಪತ್ರ ಬರೆಯಲಾಗಿದೆ. ಮತ್ತೂ ಸಿಲಿಂಡರ್ ಪೂರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕಟ್ಟಿಗೆ ಅಡುಗೆಯತ್ತ ಕಟೀಲಿನ ಚಿತ್ತ
ಇನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನ್ನಪ್ರಸಾದ ವ್ಯವಸ್ಥೆಗೆ ನಾಲ್ಕು ದಿನಗಳ ಮಟ್ಟಗೆ ಗ್ಯಾಸ್ ವ್ಯವಸ್ಥೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಟ್ಟಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿ ದಿನಕ್ಕೆ ಹತ್ತು ಸಾವಿರದಷ್ಟು ಮಂದಿ ಊಟ ಮಾಡುತ್ತಾರೆ. ಇಲ್ಲಿನ ಶಾಲೆಗಳ ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಗ್ಯಾಸನ್ನು ಅವಲಂಬಿಸಿ ಇದೆ. ಯುದ್ಧದ ಪರಿಣಾಮ ಇಂಧನಕ್ಕೂ ಆಗುತ್ತಿರುವುದರಿಂದ ಇದು ದೇಗುಲಗಳ ವ್ಯವಸ್ಥೆಗೂ ಸಮಸ್ಯೆ ಆಗಬಹುದು.
ಕಟೀಲಿನ ಭೋಜನಶಾಲೆಯಲ್ಲಿ ಕಟ್ಟಿಗೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆಗಳಿದ್ದು, ಗ್ಯಾಸ್ ಸಮಸ್ಯೆ ಆದಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುವ ನಿಟ್ಟಿನಲ್ಲಿ ದೇವಸ್ಥಾನ ಕಟ್ಟಿಗೆ ಖರೀದಿಗೆ ಮುಂದಾಗಿದೆ.



