ಹೊಸದಿಗಂತ ಡಿಜಿಟಲ್ ಡೆಸ್ಕ್;
ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಫ್ರಾಂಚೈಸಿಗಳು ತಂಡದಿಂದ ಹಲವು ಆಟಗಾರರನ್ನು ಕೈಬಿಡಲು ಪ್ಲಾನ್ ಮಾಡುತ್ತಿದ್ದು, ಈ ಸಾಲಿನಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡಿದೆ.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ತಂಡದಿಂದಲೇ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಕಳೆದ 17ನೇ ಆವೃತ್ತಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ದಿಢೀರ್ ಆಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿ, 5 ಬಾರಿ ಕಪ್ ಗೆಲ್ಲಿಸಿದ ರೋಹಿತ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದು ರೋಹಿತ್ ಅಭಿಮಾನಿಗಳು ಸೇರಿ ತಂಡದ ಸಹ ಆಟಗಾರರಿಗೂ ತೀವ್ರ ನೋವುಂಟು ಮಾಡಿತ್ತು. ಇದೀಗ ಸೂರ್ಯಕುಮಾರ್ ಯಾದವ್ ಅವರನ್ನು ಮುಂದಿನ ಆವೃತ್ತಿಗೆ ನಾಯಕನನ್ನಾಗಿ ಮಾಡಲು ಮುಂಬೈ ಫ್ರಾಂಚೈಸಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ಮಾಹಿ ನೀಡಿದೆ.
ರೋಹಿತ್ ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು ಭಾರತದ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗಿತ್ತು. ಇದೇ ಕಾರಣದಿಂದ ಮುಂಬೈ ಫ್ರಾಂಚೈಸಿ ಅವರನ್ನು ಗುಜರಾತ್ ತಂಡದಿಂದ ಕರೆತಂದು ನಾಉಕನ ಸ್ಥಾನ ನೀಡಿತ್ತು. ಆದರೆ, ಇದೀಗ ಭಾರತ ತಂಡಕ್ಕೆ ಸೂರ್ಯಕುಮಾರ್ ನಾಯಕನಾಗಿದ್ದಾರೆ. ಹೀಗಾಗಿ ಇವರಿಗೆ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.
ಸೂರ್ಯಕುಮಾರ್ ಅವರಿಗೆ ನಾಯಕತ್ವ ನೀಡಿದರೆ ರೋಹಿತ್ ಅಭಿಮಾನಿಗಳು ಕೂಡ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ರೋಹಿತ್ ಅವರ ಆಪ್ತರೂ ಆಗಿರುವ ಸೂರ್ಯನಿಗೆ ನಾಯಕನ ಸ್ಥಾನ ನೀಡಿದರೆ ರೋಹಿತ್ ಮುಂಬೈ ತಂಡ ತೊರೆಯಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ರೋಹಿತ್ ಅವರನ್ನು ಅಂದು ನಾಯಕತ್ವದಿಂದ ಕೆಳಗಿಳಿಸಿದ ವೇಳೆ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಒಡೆದು ಹೋದ ಹೃದಯದ ಎಮೊಜಿ ಹಾಕಿ ಅಸಮಾಧಾನ ಹೊರಹಾಕಿದ್ದರು.
ಪಾಂಡ್ಯ ಅವರನ್ನು ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೇ ಕೈಬಿಡಲು ಮುಂದಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ ಮತ್ತು ಒಮ್ಮೆ ಫೈನಲ್ ತಲುಪಿಸಿದ ಸಾಧನೆ ಪಾಂಡ್ಯ ಅವರದ್ದಾಗಿತ್ತು. ಒಂದೊಮ್ಮೆ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಕೈ ಬಿಟ್ಟರೆ ಅವರು ಯಾವ ತಂಡ ಸೇರಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.