ಶಿವಮೊಗ್ಗದಲ್ಲಿ ದೇಸಿ ಬೀಜೋತ್ಸವದ ಗೌಜಿ: ಇಲ್ಲಿದೆ ತರಕಾರಿ-ಸೊಪ್ಪು ಬೀಜಗಳು, ಸಿರಿ ಧಾನ್ಯಗಳು!

ಹೊಸದಿಗಂತ ವರದಿ, ಶಿವಮೊಗ್ಗ:

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರದಿಂದ ಆಯೋಜಿಸಲಾಗಿರುವ ಎರಡು ದಿನಗಳ ದೇಸೀ ಬೀಜೋತ್ಸವ ಆರಂಭದ ದಿನವೇ ಆಸಕ್ತರನ್ನು ಸೆಳೆಯುವಲ್ಲಿ ಯಶಸ್ವಿ ಯಾಗಿದೆ.

ನಗರದಲ್ಲಿ ಕೆಲಕಾಲ ಬಂದ ಮಳೆಯ ನಡುವೆಯೂ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ಬೀಜ ಮೇಳದಲ್ಲಿ ಪಾಲ್ಗೊಂಡರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಸಾವಯವ ಕೃಷಿ ಸಂಶೋಧನಾ ಸಂಸ್ಥೆಗಳಿಂದ ಸಂರಕ್ಷಣೆ ಮಾಡಿರುವ ನೂರಾರು ತಳಿಯ ಭತ್ತದ ವೈವಿಧ್ಯವನ್ನು ಇಲ್ಲಿ ಕಾಣಬಹುದಾಗಿದೆ. ಅದರ ಜೊತೆಗೆ ಮೈಸೂರಿನ ಸಹಜ ಸಮೃದ್ಧ ಸಂಸ್ಥೆ ದೇಸೀ ಬೀಜಗಳನ್ನು ಸಂರಕ್ಷಣೆ ಮಾಡಿ ಮಾರಾಟ ಮಾಡುತ್ತಿದೆ. 20 ಕ್ಕೂ ಹೆಚ್ಚು ಮಳಿಗೆಗಳು ಇಲ್ಲಿವೆ.

ರೈತರು ತಾವು ಸಂರಕ್ಷಿಸಿದ ದೇಸಿ ಬೀಜಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಿದ್ದಾರೆ. ಹತ್ತಾರು ರೈತರು ತಮ್ಮ ಸಾವಯವ ಕೃಷಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮನೆಯಲ್ಲೇ ತಯಾರಿಸಿರುವ ಬಿಸ್ಕತ್ ಗಳು, ಶಂಕರಪೊಳೆ, ಸೋಪು, ತರಕಾರಿ-ಸೊಪ್ಪು ಬೀಜಗಳು, ಸಿರಿ ಧಾನ್ಯ, ಇಳಕಲ್ ಸೀರೆ ಮಳಿಗೆಗಳೂ ಇವೆ.

ಸಿರಿವಂತೆ ಚಂದ್ರಶೇಖರ್ ಭತ್ತದ ತೆನೆಯಲ್ಲಿ ನೇಯ್ದ ತೋರಣಗಳನ್ನು ಇರಿಸಿದ್ದರೆ, ಮಲೆಬೆನ್ನೂರು ರೈತ ಮಹಿಳೆ ಭಾರೀ ಗಾತ್ರದ ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ಇದರ ಜೊತೆಗೆ ಸಾವಯವ ಕೃಷಿಯಲ್ಲಿ ಬೆಳೆದ ಧಾನ್ಯಗಳಿಂದ ತಯಾರಿಸಿದ ಆಹಾರ ಮೇಳವೂ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!